ಹೊಸಪೇಟೆ: ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಸೇವಾ ನೌಕರರನ್ನು ಕಾಯಂಗೊಳಿಸಲು ಒತ್ತಾಯಿಸಿ ಪೌರ ಕಾರ್ಮಿಕರ ರಾಜ್ಯಮಟ್ಟದ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಮುಖಂಡ ರಾಮಚಂದ್ರ ತಿಳಿಸಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹೊಸಪೇಟೆಯ ಸಮಾನತೆ ಯೂನಿಯನ್, ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳ ಪೌರಕಾರ್ಮಿಕರ ಮಹಾಸಂಘ, ಸ್ಲಂ ಜನಾಂದೋಲನ-ಕರ್ನಾಟಕ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಕಾವಲಿ ಸಮಿತಿ ಸಂಯುಕ್ತವಾಗಿ ಸಮಾವೇಶ ಸಂಘಟಿಸಲಿದೆ ಎಂದರು.
ರಾಜ್ಯದ್ಯಂತ ಇರುವ 228ಕ್ಕೂ ಹೆಚ್ಚು ಪಪಂ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳಲ್ಲಿ 38 ಸಾವಿರಕ್ಕೂ ಅಧಿಕ ದಿನಗೂಲಿ, ಪೌರ ಕಾರ್ಮಿಕರು, ಚಾಲಕರು, ವಾಟರ್ಮನ್ಗಳು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಗುತ್ತಿಗೆ ಪದ್ಧತಿ ಎಂಬುದು ಆಧುನಿಕ ಜೀತ ಪದ್ಧತಿ ಅಲ್ಲದೇ ಮತ್ತೇನಲ್ಲ. ಖಾಸಗೀಕರಣದ ಭಾಗವಾಗಿ ಆಡಳಿತ ಸುಧಾರಣೆ ಹೆಸರಿನಲ್ಲಿ ನಾಗರಿಕ ಸೇವೆಗಳನ್ನು ಖಾಸಗೀಕರಿಸುವ ಯತ್ನ ಇದರ ಹಿಂದಿದೆ ಎಂದು ಆರೋಪಿಸಿದರು.