ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 7
ಅಪೌಷ್ಟಿಕ ಆಹಾರ ಸೇವನೆಯಿಂದಾಗಿ ದೈಹಿಕ, ಮಾನಸಿಕ ಬೆಳವಣಿಗೆ ಮೇಲೆ ಪರಿಣಾಮ ಬೀಳುತ್ತದೆ ಎಂದು ಹೇಳುತ್ತಾರೆ. ಆದರೆ, ಪೌಷ್ಟಿಕ ಆಹಾರದಲ್ಲಿ ತರಕಾರಿಗಳು ಒಂದಾಗಿವೆ. ಕಾರ್ಮಿಕನು ದಿನದ ಕೂಲಿಗೆ ಕೇವಲ ಒಂದು ಕೆಜಿ ಕ್ಯಾರೆಟ್, ಸೌತೆಕಾಯಿ, ಹೀರೇಕಾಯಿ ಕೊಳ್ಳದಷ್ಟು ಬೆಲೆಗಳು ಗಗನಕ್ಕೇರಿವೆ. ಕೂಲಿ ಮಾಡುವ ವ್ಯಕ್ತಿ ಇರಲಿ, ಮಧ್ಯಮ ಮತ್ತು ಶ್ರೀಮಂತರೂ ತರಕಾರಿ ಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಈ ಬಾರಿ ಮಳೆ ಅಭಾವವು ಕೇವಲ ರೈತರ ಮುಂಗಾರು ಬಿತ್ತನೆಯ ಮೇಲೆ ಪ್ರಭಾವ ಬೀರುವುದಲ್ಲದೆ, ಜನಸಾಮಾನ್ಯರ ಬದುಕಿನ ಮೇಲೆ ಪ್ರಭಾವ ಬೀಳಲು ಕಾರಣವಾಗಿದೆ. ಮಳೆ ಕಡಿಮೆಯಾಗಿರುವುದರಿಂದ ತರಕಾರಿ ಕಡಿಮೆ ಬೆಳೆದಿರುವುದು, ಇನ್ನು ಕಳೆದ 2-3 ವರ್ಷಗಳಿಂದ ಬರಗಾಲ ಎದುರಾಗಿರುವುದರಿಂದ ಅಂತರ್ಜಲ ಮಟ್ಟ ಕುಸಿದಿರುವುದು ಪಂಪ್ಸೆಟ್ಗಳ ಮೂಲಕ ತರಕಾರಿ ಬೆಳೆಯುತ್ತಿರುವ ರೈತರು ಕೂಡ ನೀರಿನ ಅಭಾವದಿಂದ ತರಕಾರಿ ಬೆಳೆಯುವುದಕ್ಕೆ ಹಿಂದೇಟು ಹಾಕುವುದರಿಂದ ತರಕಾರಿ ಬೆಲೆ ಗಗನಕ್ಕೇರಲು ಕಾರಣವಾಗಿದೆ.
ಕೂಲಿಕಾರರ ಪಾಡು ಹೇಳತೀರದು: ಕೂಲಿ ಕಾರ್ಮಿಕರು ದಿನವೊಂದಕ್ಕೆ ರು. 100 ದುಡಿದರೂ ದುಡಿಮೆಯಲ್ಲಿ ತರಕಾರಿ ಕೊಳ್ಳುವುದಕ್ಕೆ ಆಗುವುದಿಲ್ಲ, ಇನ್ನು ನಿತ್ಯದ ಬದುಕು ಸಾಗಿಸುವುದಾದರೂ ಹೇಗೆ ಎಂಬಂತಾಗಿದೆ. ಕೇವಲ ಕೂಲಿಕಾರರು ಮಾತ್ರವಲ್ಲ, ಮಧ್ಯಮ ವರ್ಗದವರು ಹಾಗೂ ಶ್ರೀಮಂತರೂ ಕೂಡ ಬೆಲೆ ಹೆಚ್ಚಳವಾಗಿರುವುದರಿಂದ ಕಾಯಿಪಲ್ಲೆ ಬಳಕೆಯನ್ನು ತೀರಾ ಕಡಿಮೆ ಮಾಡಿದ್ದರೆ, ಇನ್ನು ಕೆಲವರು ಅನಿವಾರ್ಯವೆಂಬಂತೆ ಕೊಂಡು ತಿನ್ನುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಪೌಷ್ಟಿಕ ಆಹಾರ ಎಂಬ ಮಾತು ದೂರವೇ ಉಳಿಯುತ್ತದೆ. ನಿತ್ಯದ ಅಡುಗೆ ಬೇಕಾಗಿರುವ ಅಗತ್ಯವಾದ ಟೊಮೇಟೊ ಹಾಗೂ ಹಸಿ ಮೆಣಸಿನಕಾಯಿ ಬೆಲೆಯು ಗಗನಕ್ಕೇರಿರುವುದರಿಂದ ಜನಸಾಮಾನ್ಯರು ತೀರಾ ಸಮಸ್ಯೆಯನ್ನು ಎದುರಿಸುವಂತಾಗಿದೆ.
ಬೆಲೆಗಳು ಕೇಳುವಂತಿಲ್ಲ, ಹೇಳುವಂತಿಲ್ಲ: ಒಂದು ತಿಂಗಳಿಂದ ತರಕಾರಿ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಳ್ಳಾರಿಯ ಮಾರುಕಟ್ಟೆಗೆ ಮಳೆಯ ಅಭಾವದಿಂದ ಕಾಯಿಪಲ್ಲೆ ಕಡಿಮೆ ಬರುತ್ತಿರುವ ಹಿನ್ನೆಲೆಯಲ್ಲಿ ಬೆಲೆಗಳು ಹೆಚ್ಚಾಗಲು ಕಾರಣವಾಗಿದೆ.
ಕೆಜಿಯೊಂದಕ್ಕೆ ಈರುಳ್ಳಿ ರು. 25 ರಿಂದ 30, ಕ್ಯಾರೆಟ್ ರು. 50, ಬೀಟ್ರೋಟ್ ರು. 30, ಸೌತೆಕಾಯಿ ರು. 25ರಿಂದ 30, ಹೀರೇಕಾಯಿ ರು. 20 ರಿಂದ 25, ಬೀನ್ಸ್ ರು. 50ರಿಂದ 60, ಕೋಸು ರು. 25ರಿಂದ 30 ಆಲೂಗಡ್ಡೆ ರು. 30, ಟೊಮೇಟೊ ರು. 30, ಚವಳಿಕಾಯಿ ರು. 25, ಬೆಂಡೆಕಾಯಿ ರು. 25, ಹಾಗಲಕಾಯಿ ರು. 35 ರಿಂದ 40, ಮೆಣಸಿನಕಾಯಿ ರು. 50, ಮೂಲಂಗಿ ರು. 30, ಬದನೆಕಾಯಿ ರು. 40, ಇದು ಸಗಟು ಮಾರುಕಟ್ಟೆ ಬೆಲೆಯಾಗಿದೆ.
ಕಿರಾಣಿ ಅಂಗಡಿ ಹಾಗೂ ಕಾಯಿಪಲ್ಲೆ ವ್ಯಾಪಾರಿ ರಂಗಸ್ವಾಮಿ ಮಾತನಾಡಿ, ಸಗಟು ಮಾರುಕಟ್ಟೆಯಲ್ಲಿ ತರಕಾರಿ ದುಬಾರಿ ಆಗಿರುವುದರಿಂದ ಹೆಚ್ಚಿನ ಕಾಯಿಪಲ್ಲೆ ತಂದು ಮಾರಾಟ ಮಾಡುವುದಕ್ಕೆ ಭಯವಾಗುತ್ತದೆ. ಸಗಟು ವ್ಯಾಪಾರದ ಬೆಲೆಯನ್ನು ಇಟ್ಟರೂ, ಹೆಚ್ಚಿನ ಬೆಲೆ ಎಂದು ಗ್ರಾಹಕರು ಹೇಳುತ್ತಾರೆ. ಕೇವಲ ಕೂಲಿ ಕೆಲಸ ಮಾಡುವವರಲ್ಲ, ಮಧ್ಯಮ ವರ್ಗದವರು ಹಾಗೂ ಶ್ರೀಮಂತರು ಕೂಡ ಕಾಯಿಪಲ್ಲೆಯನ್ನು ಕೊಳ್ಳುವುದಕ್ಕೆ ಮುಂದಾಗುತ್ತಿಲ್ಲ ಎಂದು ತಿಳಿಸಿದರು.
ಸಗಟು ವ್ಯಾಪಾರಿಗಳನ್ನು ಮಾತನಾಡಿಸಿದರೆ, ಮಳೆಯ ಅಭಾವದಿಂದ ಮಾರುಕಟ್ಟೆಗೆ ಹೆಚ್ಚಿನ ಕಾಯಿಪಲ್ಲೆ ಬರುತ್ತಿಲ್ಲ, ಇದರಿಂದಾಗಿ ಬೆಲೆಯು ಹೆಚ್ಚಾಗಿದೆ ಎನ್ನುತ್ತಾರೆ.
-ಶಶಿಧರ ಮೇಟಿ