ಬಳ್ಳಾರಿ: ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಸಂಚರಿಸುತ್ತಿರುವ ಜಿಲ್ಲೆಯಲ್ಲಿನ ಖಾಸಗಿ ವಾಹನಗಳನ್ನು ನಿಯಂತ್ರಿಸುವಂತೆ ಒತ್ತಾಯಿಸಿ ಕೆಎಸ್ಸಾರ್ಟಿಸಿ ಸಿಬ್ಬಂದಿ, ಕಾರ್ಮಿಕರ ಸಂಘವು ನಗರದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ) ಎದುರು ನಡೆಸುತ್ತಿರುವ ಸರದಿ ಧರಣಿ ಸತ್ಯಾಗ್ರಹ ಗುರುವಾರ 4ನೇ ದಿನಕ್ಕೆ ಕಾಲಿಟ್ಟರೂ, ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವರ್ತನೆ ಖಂಡಿಸಿ ಜು. 19ರಂದು ಆರ್ಟಿಓ ಅಧಿಕಾರಿಗಳ ಪ್ರತಿಕೃತಿ ದಹಿಸಿ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಕೆಎಸ್ಸಾರ್ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಎಂ. ಆದಿಮೂರ್ತಿ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ 1600 ಖಾಸಗಿ ವಾಹನಗಳು ಪರವಾನಗಿ ಇಲ್ಲದೆ ಪ್ರಯಾಣಿಕರ ಸಂಚಾರಕ್ಕೆ ಬಳಕೆಯಾಗುತ್ತಿವೆ. ಕಾಂಟ್ರ್ಯಾಕ್ಟ್ ಕ್ಯಾರೇಜ್ ಪರ್ಮಿಟ್ ಪಡೆದು ಸ್ಟೇಜ್ ಕ್ಯಾರೇಜ್ ಪರ್ಮಿಟ್ನಲ್ಲಿ ವಾಹನಗಳನ್ನು ಓಡಿಸುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯ ಸಾರಿಗೆ ಸಂಸ್ಥೆಗೆ ದಿನವೊಂದಕ್ಕೆ ರು. 15- ರು. 16 ಲಕ್ಷ ನಷ್ಟವಾಗುತ್ತಿದೆ. ಇನ್ನು ರಾಜ್ಯದಲ್ಲಿ ಸಾರಿಗೆ ಸಂಸ್ಥೆಗೆ ದಿನವೊಂದಕ್ಕೆ ರು. 3 ಕೋಟಿ ನಷ್ಟವಾಗುತ್ತಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಖಾಸಗಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡುತ್ತಿಲ್ಲ ಎಂದು ತಿಳಿಸಿದರು.
ಖಾಸಗಿ ಬಸ್ಗಳು ಬಸ್ ನಿಲ್ದಾಣ ಪಕ್ಕ ಅಥವಾ ಮುಂದುಗಡೆ ವಾಹನಗಳನ್ನು ನಿಲ್ಲಿಸಿ, ಏಜೆಂಟ್ರು ಬಸ್ ನಿಲ್ದಾಣದ ಒಳಗಡೆ ಬಂದು ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಾರೆ. ಇದರಿಂದಾಗಿ ಸಾರಿಗೆ ಸಂಸ್ಥೆಗೆ ಸಾಕಷ್ಟು ನಷ್ಟವಾಗುತ್ತಿರುವುದರಿಂದ ಖಾಸಗಿ ಬಸ್ ಸೇರಿದಂತೆ ಪ್ರಯಾಣಿಕರನ್ನು ಸಾಗಿಸುವ ಟೆಂಪೋ, ಟ್ರಾಕ್ಸಿ ಸೇರಿದಂತೆ ಇತರ ವಾಹನಗಳನ್ನು ಜಪ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಆರ್ಟಿಒ ಬಂದು ನಮ್ಮ ಮರ್ಯಾದೆ ಹೋಗುತ್ತಿದೆ, ಧರಣಿ ಹಿಂದಕ್ಕೆ ಪಡೆಯಬೇಕೆಂದು ಹೇಳುತ್ತಾರೆ. ನಮ್ಮ ಮೇಲೆ ರಾಜಕೀಯ ಒತ್ತಡ, ಪ್ರಭಾವಿಗಳ ಒತ್ತಡ ಹೆಚ್ಚಿದೆ ಎಂದು ಹೇಳುತ್ತಾರೆ. ಆದರೆ ಸರ್ಕಾರದ ನಿಯಮಗಳನ್ನು ಪಾಲನೆ ಮಾಡುವುದಕ್ಕೆ ಒತ್ತಡ ಇದೆ ಎಂದು ಹೇಳಿದರೆ ಹೇಗೆ ಎಂದು ಆರ್ಟಿಓ ಕ್ರಮವನ್ನು ಖಂಡಿಸಿದರು.
ಬಳ್ಳಾರಿಯಿಂದಲೇ 18 ಖಾಸಗಿ ಬಸ್ಗಳ ಬೆಂಗಳೂರಿಗೆ ಹೋಗುತ್ತಿದ್ದು, ಇವುಗಳಿಗೆ ಸ್ಟೇಜ್ ಕ್ಯಾರೇಜ್ ಪರ್ಮಿಟ್ ಇಲ್ಲ, ಆದರೂ ಅನಧಿಕೃತವಾಗಿ ಸಂಚರಿಸುತ್ತಿವೆ, ಬಳ್ಳಾರಿ ಜಿಲ್ಲೆಯಲ್ಲಿ ಕೆಲವೊಂದು ಖಾಸಗಿ ಬಸ್ಗಳಿಗೆ ಕಾಂಟ್ರ್ಯಾಕ್ಟ್ ಗ್ಯಾರೇಜ್ ಇದ್ದರೂ, ಸ್ಟೇಜ್ ಕ್ಯಾರೇಜ್ ಪರ್ಮಿಟ್ನಲ್ಲಿ ವಾಹನಗಳನ್ನು ಓಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಎಸ್ಸಾರ್ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಸಂಘದ ಕಾಂತಯ್ಯ ಗುತ್ತರಗಿಮಠ, ಚೆನ್ನಪ್ಪ, ಬಸವರಾಜ್ ಇದ್ದರು.