ಹೊಸಪೇಟೆ: ಉದ್ಯೋಗ ಖಾತ್ರಿ ಯೋಜನೆಯಲ್ಲಿ
ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಹಣ ಹಾಗೂ ಭತ್ಯೆ ನೀಡಬೇಕೆಂದು ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ನೂರಾರು ಕಾರ್ಮಿಕರು ನಗರದ ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಮೂರು ತಿಂಗಳಾದರೂ ಕೂಲಿ ಹಣ ಪಾವತಿಸಿಲ್ಲ. ಇದೇ ರೀತಿಯಲ್ಲಿ ಡಣಾಪುರದ ಕೂಲಿಕಾರ್ಮಿಕರಿಗೂ ಕೂಲಿ ಹಣ ನೀಡಿಲ್ಲ. ಗರಗ ನಾಗಲಾಪುರ, ಗುಂಡಾ, ಗುಂಡಾ ತಾಂಡದಲ್ಲಿ ಈ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿಕಾರ್ಮಿಕರಿಗೆ ಐದು ತಿಂಗಳಾದರೂ ಕೂಲಿ ಹಣ ನೀಡಿಲ್ಲ. ಡಣಾಯಕನ ಕೆರೆ, ದೇವಲಾಪುರ ಗ್ರಾಮದಲ್ಲೂ ಇದೇ ಸಮಸ್ಯೆ ಉಂಟಾಗಿದೆ. ಕೂಲಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಹಾಗೂ ಭತ್ಯೆ ನೀಡಬೇಕೆಂದು ಒತ್ತಾಯಿಸಿ ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಉದೋಗ್ಯ ಖಾತ್ರಿ ಯೋಜನೆಯಲ್ಲಿ ನೂರು ದಿನಗಳ ಕಾಲ ನಿರಂತರ ಕೂಲಿ ಕೆಲಸ ನೀಡಬೇಕು. ಕೂಲಿಕಾರರಿಗೆ ಉಚಿತ ನಿವೇಶನ ನೀಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ತಾಪಂ ಇಓ ರಮೇಶ್ ತಳವಾರ್ ಮಾತನಾಡಿ, ಬಾಕಿ ಇರುವ ಕೂಲಿಕಾರರ ಹಣವನ್ನು ಬಿಡುಗಡೆ ಮಾಡುವ ಭರವಸೆ ನೀಡಿದರು.
ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ಮುಖಂಡ ಮಲ್ಲಣ್ಣಿ ಎನ್, ಹುಲಿಗೆಮ್ಮ, ಬಿ. ಶಬ್ಬೀರ್ ಭಾಷಾ ಸೇರಿದಂತೆ ಇತರರು ಇದ್ದರು.