ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 26
ಆಂಧ್ರಪ್ರದೇಶದಿಂದ ಕುಡಿಯುವ ನೀರಿಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಿಂದ ಎಚ್ಎಲ್ಸಿ (ಮೇಲ್ಮಟ್ಟದ ಕಾಲುವೆ)ಗೆ ಶನಿವಾರ ಎರಡು ಸಾವಿರ ಕ್ಯುಸೆಕ್ ನೀರು ಬಿಡಲಾಗಿದೆ.
ತುಂಗಭದ್ರಾ ಮಂಡಳಿಯ ಈ ಕ್ರಮ ವಿರೋಧಿಸಿ ರೈತರು ತಾಲೂಕಿನ ಕೊಳಗಲ್ ಸಮೀಪ ಅಧಿಕಾರಿಗಳ ಸಮ್ಮುಖವೇ ನಾಲ್ಕು ಡಿಪಿಗಳನ್ನು ತೆಗೆದು ಉಪಕಾಲುವೆಗೆ ನೀರು ಬಿಟ್ಟರು. ಈ ಸಂದರ್ಭದಲ್ಲಿ ರೈತರು ಹಾಗೂ ನೀರಾವರಿ, ಪೊಲೀಸ್ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.
ನಾಟಿ ಮಾಡಿದ ಬೆಳೆ ಹಾಳಾಗುತ್ತಿದೆ. ಎಚ್ಎಲ್ಸಿಗೆ ನೀರು ಬಿಡುವಂತೆ ಹಸಿರು ಸೇನೆ ನೇತೃತ್ವದಲ್ಲಿ ರೈತರು ಸಚಿವರಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ಅಧಿಕಾರಿಗಳು ನೀರು ಬಿಟ್ಟಿರಲಿಲ್ಲ. ಆದರೆ ಈಗ ಆಂಧ್ರದಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ನೀರು ಬಿಟ್ಟಿರುವುದು ರೈತರ ಆಕ್ರೋಶಕ್ಕೆ ಕಾರಣವಾಯಿತು.
ವಾಗ್ವಾದ: ಆಂಧ್ರಪ್ರದೇಶಕ್ಕೆ ಕಾಲುವೆಯ ಮೂಲಕ ಕುಡಿಯುವ ನೀರನ್ನು ಪೊಲೀಸ್ ಭದ್ರತೆಯೊಂದಿಗೆ ಹರಿಸಲಾಗಿತ್ತು. ಕೊಳಗಲ್, ಯರ್ರಂಗಳಿ, ಮಧುರೆ, ಲಕ್ಷ್ಮೀಪುರ ಕ್ಯಾಂಪ್ನ ಸಮೀಪ ರೈತರು ಎಚ್ಎಲ್ಸಿಯಲ್ಲಿ ಹರಿಯುತ್ತಿದ್ದ ನೀರನ್ನು ನಾಲ್ಕು ಡಿಪಿಗಳನ್ನು ಎತ್ತಿ, ಉಪಕಾಲುವೆಗೆ ಹರಿಸಿದರು. ತಡೆಯಲು ಹೋದ ಪೊಲೀಸರು-ರೈತರೊಂದಿಗೆ ಮಾತಿನ ಚಕಮಕಿ ನಡೆಯಿತು. ಸ್ಥಳ ಬಂದ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ರಮೇಶ್ ಅವರೊಂದಿಗೆ ರೈತರು ವಾಗ್ವಾದ ನಡೆಸಿದರು. ಆಂಧ್ರಪ್ರದೇಶದಿಂದ ಇಂಡೆಂಟ್ ಬಂದಿದ್ದರಿಂದ ನೀರು ಬಿಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು. ಆದರೆ ರೈತರು ಅವರ ಮಾತನ್ನು ಒಪ್ಪಲಿಲ್ಲ. ಕರ್ನಾಟಕಕ್ಕೆ ನೀರು ಬಿಡಲು ಐಸಿಸಿ ಮೀಟಿಂಗ್ ಆಗಬೇಕು ಎಂದು ಹೇಳುತ್ತಾರೆ. ಸ್ಥಳಕ್ಕೆ ಬೋರ್ಡ್ ಅಧಿಕಾರಿಗಳು ಬರಲಿ, ಉತ್ತರಿಸುತ್ತೇವೆ. ಸಭೆ ನಡೆಸುವುದು, ಬಿಡುವುದು ತಮಗೆ ಗೊತ್ತಿಲ್ಲ, ಬಿತ್ತನೆ ಮಾಡಿರುವ ಬೆಳೆ ನೀರಿಲ್ಲದೆ ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ತುಂಗಭದ್ರಾ ಜಲಾಶಯದಲ್ಲಿ ನೀರಿದ್ದರೂ, ಕಾಲುವೆಗೆ ನೀರು ಬಿಡುತ್ತಿಲ್ಲ, ಈ ಹಿನ್ನೆಲೆಯಲ್ಲಿ ಡಿಪಿ ಎತ್ತಲಾಗುತ್ತಿದೆ ಎಂದು ಹೇಳಿದರು.
ಉತ್ತರಿಸುತ್ತೇವೆ: ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಪುರುಷೋತ್ತಮಗೌಡ ಮಾತನಾಡಿ, ರೈತರು ಬಿತ್ತನೆ ಮಾಡುತ್ತಿರುವ ಬೆಳೆ ಒಣಗಿ ಹೋಗುತ್ತಿರುವುದರಿಂದ ಎಚ್ಎಲ್ಸಿಗೆ ನೀರು ಬಿಡುವಂತೆ ಸಂಘದ ನೇತೃತ್ವದಲ್ಲಿ ನೂರಾರು ರೈತರು ಸಂಬಂಧಪಟ್ಟ ಸಚಿವರು, ಶಾಸಕರು, ಬೋರ್ಡ್ನ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ನೀರು ಬಿಟ್ಟಿಲ್ಲ. ಇದೀಗ ಆಂಧ್ರಪ್ರದೇಶದಿಂದ ಬೇಡಿಕೆ ಬಂದಿದೆ ಎಂದು 2000 ಕ್ಯುಸೆಕ್ ನೀರು ಬಿಟ್ಟಿದ್ದಾರೆ. ನಮ್ಮ ರೈತರು ಒತ್ತಡ ಹಾಕುವ ಮೂಲಕ ಅಧಿಕಾರಿಗಳ ಮೂಲಕವೇ ಡಿಪಿ ಎತ್ತಿಸಿದ್ದಾರೆ. ಎತ್ತಿರುವ ಡಿಪಿಗಳನ್ನು ಇಳಿಸುವುದಿಲ್ಲ. ಬೋರ್ಡ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಲಿ, ಉತ್ತರಿಸುತ್ತೇವೆ. ಕೂಡಲೇ ಸರ್ಕಾರ, ಅಧಿಕಾರಿಗಳು ಇಂಡೆಂಟ್ ನೀಡಬೇಕು ಎಂದು ಒತ್ತಾಯಿಸಿದರು.
ಘಟನಾ ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಡಿವೈಎಸ್ಪಿ ರುದ್ರಮುನಿ, ಸಿಪಿಐ ಉಮೇಶ್ ಈಶ್ವರ ನಾಯಕ್, ಪಿಎಸ್ಐ ಹೊಸಕೇರಪ್ಪ ಭೇಟಿ ನೀಡಿ, ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದರು. ಕಾಲುವೆಯ ಮೇಲೆ ಡಿಎಆರ್ ತುಕಡಿ, ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು