ಹೊಸಪೇಟೆ: ರೈತರ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಸರ್ಕಾರದ ಯೋಜನೆಗಳನ್ನು ರೈತರು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕಾಭಿವೃದ್ಧಿ ಹೊಂದಲು ಮುಂದಾಗಬೇಕು ಎಂದು ಮರಿಯಮ್ಮನಹಳ್ಳಿಯ ಕೃಷಿ ಇಲಾಖೆ ಸಹಾಯಕ ಕೃಷಿ ಅಧಿಕಾರಿ ಕರಿಯಪ್ಪ ಹೇಳಿದರು.
ತಾಲೂಕಿನ ಮರಿಯಮ್ಮನಹಳ್ಳಿಯ ಹೋಬಳಿಯ ನಂದಿಬಂಡಿ ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ವಾಹಿನಿ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಸಾವಯವ ಭಾಗ್ಯ ಯೋಜನೆ ಅಡಿಯಲ್ಲಿ ಅಡವಿ ಬಸವೇಶ್ವರ ಸಾವಯವ ಕೃಷಿಕರ ಸಂಘದ ರೈತರಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿಯಲ್ಲಿ ದ್ರವರೂಪದ ಸಾವಯವ ಗೊಬ್ಬರ ತಯಾರಿಕೆ ಮತ್ತು ಪ್ರಾತ್ಯಕ್ಷಿಕೆ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಭಿವೃದ್ಧಿ ಹೊಂದಿ: ಪ್ರಸ್ತುತ ಸಾವಯವ ಭಾಗ್ಯ ಯೋಜನೆಯಡಿ ರೈತರಿಗೆ ದ್ರವರೂಪದ ಸಾವಯವ ಗೊಬ್ಬರಗಳಾದ ಜೀವಾಮೃತ ತಯಾರಿಕೆ ಮತ್ತು ಮಹತ್ವ ಕುರಿತು ತರಬೇತಿ ಹಮ್ಮಿಕೊಂಡಿದ್ದು ಈ ಸಾರವನ್ನು ಎಲ್ಲ ರೈತರೂ ತಯಾರು ಮಾಡಿ ತಮ್ಮ ಹೊಲಗಳಿಗೆ ಉಪಯೋಗ ಮಾಡಿಕೊಂಡು ಉತ್ತಮ ಬೆಳೆ ಬೆಳೆಯುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಮುಂದಾಗಬೇಕು ಎಂದು ಅವರು ಹೇಳಿದರು. ತರಬೇತಿ ಶಿಬಿರದ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ ಮಾತನಾಡಿ, ರೈತರು ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಕೈಗೊಳ್ಳುವ ಮೂಲಕ ಉತ್ತಮ ಬೆಳೆ ಬೆಳೆಯಲು ಮುಂದಾಗಬೇಕು ಎಂದರು. ಶಿವಕುಮಾರ್ ಮಾತನಾಡಿ, ಸಾವಯವ ಭಾಗ್ಯ ಯೋಜನೆಯು 3 ವರ್ಷಗಳ ಕಾಲ ನಿಮ್ಮ ಗ್ರಾಮದಲ್ಲಿ ನಡೆಯಲಿದ್ದು, ಪ್ರತಿ ಹಂತದಲ್ಲೂ ರೈತರಿಗೆ ಬೇಕಾದ ಮಾಹಿತಿಯನ್ನು ಕೃಷಿ ಇಲಾಖೆ ಹಾಗೂ ನಾವು ಮಾಹಿತಿ ನೀಡುತ್ತೇವೆ. ರೈತರು ಸದುಪಯೋಗ ಪಡೆದುಕೊಂಡು ಆರ್ಥಿಕಾಬಿವೃದ್ಧಿ ಹೊಂದಲು ಮುಂದಾಗಬೇಕು ಎಂದು ಅವರುಹೇಳಿದರು.
ಅಡವಿ ಬಸವೇಶ್ವರ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಗೋವಿಂದರಾಜು, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮದ ಮುಖಂಡರು ಮತ್ತು ಪ್ರಗತಿಪರ ರೈತರು ಸಭೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸ್ಥಳೀಯ ಪ್ರಗತಿಪರ ರೈತರಿಗೆ ಕೃಷಿ ಇಲಾಖೆ ಸಹಾಯಕ ಆಧಿಕಾರಿ ಕರಿಯಪ್ಪ, ಕೆ. ಶಿವಕುಮಾರ್ ಚೆಕ್ ವಿತರಿಸಿದರು. ವಾಹಿನಿ ಅಭಿವೃದ್ಧಿ ಸಂಸ್ಥೆಯ ಮಹಾಲಕ್ಷ್ಮೀ ಸ್ವಾಗತಿಸಿದರು. ಹುಲುಗಪ್ಪ ವಂದಿಸಿದರು.