ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 2
ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು, ನಿವೇಶನ ರಹಿತರಿಗೆ ನಿವೇಶನ, ವಸತಿ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರದಿಂದ ಐದು ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದೆ.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ರಾಜ್ಯದಲ್ಲಿ 31,50,495 ಎಕರೆ ಸರ್ಕಾರಿ ಭೂಮಿಯಲ್ಲಿ 12,35,822 ರೈತ ಕುಟುಂಬಗಳು ಹಲವು ದಶಕಗಳಿಂದ ಸಾಗುವಳಿ ಮಾಡಿ ಜೀವನ ಸಾಗಿಸುತ್ತಿವೆ. ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳು ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡುತ್ತಿವೆ. ಆದರೆ ಈವರೆಗೂ ಸರ್ಕಾರ ಇವರಿಗೆ ಹಕ್ಕು ಪತ್ರ ನೀಡಿಲ್ಲ. ಇದರ ಬದಲಾಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ಕಡಿಮೆ ದರದಲ್ಲಿ ಸರ್ಕಾರಿ ಭೂಮಿ ಕೊಡುವ ಉದ್ದೇಶದಿಂದ ಭೂ ಬ್ಯಾಂಕ್ ತೆರೆಯಲಾಗಿದೆ. ಬಡವರ ಸಾಗುವಳಿಯ ಸರ್ಕಾರಿ ಜಮೀನಿಗೆ ಹಕ್ಕುಪತ್ರ ನೀಡದೇ ಅವರನ್ನು ಒಕ್ಕಲೆಬ್ಬಿಸಲು ಕ್ರಮ ಕೈಗೊಂಡಿರುವುದು ಖಂಡನೀಯ ಎಂದು ತಿಳಿಸಿದರು.
ಚಿಲ್ಲರೆ ವ್ಯಾಪಾರದಲ್ಲಿ ಬಹುರಾಷ್ಟ್ರೀಯ ಬಂಡವಾಳಕ್ಕೆ ಅವಕಾಶ ನೀಡಲು ರಾಜ್ಯ ಸರ್ಕಾರ ಒಪ್ಪಿರುವುದು, ಖಾಸಗಿ ಮಾರುಕಟ್ಟೆಗೆ ಅವಕಾಶ ನೀಡುವ ನೀತಿಗಳನ್ನು ಸರ್ಕಾರ ಜಾರಿಗೆ ತರುತ್ತಿರುವುದು ಹಾಗೂ ಕಂಪನಿ ಕೃಷಿ, ಗುತ್ತಿಗೆ ಕೃಷಿ, ಮುಂಗಡ ವ್ಯಾಪಾರದ ಕೃಷಿ ನೀತಿಗಳನ್ನು ಜಾರಿಗೆ ತರುವ ಹುನ್ನಾರವಾಗಿದ್ದು, ರೈತರ ಹಾಗೂ ಕೂಲಿಕಾರರ ಕೃಷಿಗೆ ಗಂಡಾತರಕಾರಿಯಾಗಿರುವುದರಿಂದ ಕೂಡಲೇ ಈ ಯೋಜನೆಗಳನ್ನು ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಬೇಡಿಕೆಗಳನ್ನು ಈಡೇರಿಸುವಂತೆ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದ ಗೌಡ, ಹಾಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆದು, ಭರವಸೆಯೂ ಸಿಕ್ಕಿತ್ತು. ಆದರೆ ಬೇಡಿಕೆ ಈಡೇರಿಸುವ ಯಾವ ಪ್ರಯತ್ನವೂ ಈವರೆಗೆ ನಡೆದಿಲ್ಲ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುವುದಕ್ಕಾಗಿ 5 ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹಕ್ಕು ಪತ್ರಕ್ಕಾಗಿ ಈ ಹಿಂದೆ ನಮೂನೆ 50 ಮತ್ತು 53ರಲ್ಲಿ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡಿರುವ, ವಿಲೇವಾರಿ ಆಗದೇ ಇರುವ ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ ಹಕ್ಕುಪತ್ರ ನೀಡಬೇಕು. ಸರ್ಕಾರಿ ಭೂಮಿ ಸಾಗುವಳಿ ಮಾಡಿ ಇನ್ನು ಅರ್ಜಿ ಹಾಕದೇ ಇರುವ ಸಾವಿರಾರು ರೈತ ಕುಟುಂಬಗಳಿದ್ದು, ಹಕ್ಕು ಪತ್ರ ನೀಡಲು ಅರ್ಜಿ ಕರೆಯುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘದ ಜಿಲ್ಲಾ ಪದಾಧಿಕಾರಿ ವಿ.ಎಸ್. ಶಿವಶಂಕರ್, ಪ್ರಾಂತ ರೈತ ಸಂಘದ ಬಿ. ಅಡಿವೆಪ್ಪ, ರಂಗಪ್ಪ ದಾಸರ, ಕೆ. ಗಾದಿಲಿಂಗಪ್ಪ, ವಿ. ಗುರುಸ್ವಾಮಿ, ಗಾಳಿ ಬಸವರಾಜ, ಅಂದ್ಯಾಳ್ ತಿಮ್ಮಪ್ಪ ಹಾಗೂ ಎನ್. ಸೋಮಪ್ಪ, ಕರಿಬಸಪ್ಪ, ಎನ್. ಹುಲಿಯಪ್ಪ, ಮೋಕಾ ರಂಗಪ್ಪ, ನಿಂಗಪ್ಪ, ಫಕ್ಕೀರಮ್ಮ, ಟಿ. ನಾಗಮ್ಮ, ಜಿ. ಹನುಮಂತಮ್ಮ, ಓಬಳೇಶಪ್ಪ ಪಾಲ್ಗೊಂಡಿದ್ದರು.