ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 3
ಬಳ್ಳಾರಿ ಜಿಲ್ಲೆಯಲ್ಲಿ ಹೊಸ ಗ್ರಾಮ ಪಂಚಾಯ್ತಿಗಳಿಗೆ, ಪಟ್ಟಣ ಪಂಚಾಯ್ತಿ ಬೇಡಿಕೆ ಸೇರಿದಂತೆ 17 ಅರ್ಜಿಗಳು ಬಂದಿವೆ. ಈಗಾಗಲೇ ರಾಜ್ಯ 12 ಜಿಲ್ಲೆಗಳಲ್ಲಿ ಸಂಚರಿಸಿದ್ದು, 750 ಅರ್ಜಿಗಳು ಬಂದಿದ್ದು, ಜೂನ್ ತಿಂಗಳ ಅಂತ್ಯದಲ್ಲಿ ಪ್ರವಾಸ ಪೂರ್ಣಗೊಳಿಸಿ, ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಸರ್ಕಾರಕ್ಕೆ ಗ್ರಾಮ ಪಂಚಾಯ್ತಿ ಪುನರ್ ವಿಂಗಡಣೆ ಕುರಿತಾಗಿ ವರದಿ ಸಲ್ಲಿಸಲಾಗುತ್ತದೆ ಎಂದು ಗ್ರಾಮ ಪಂಚಾಯ್ತಿ ಪುನರ್ ವಿಂಗಡಣೆ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ತಿಳಿಸಿದ್ದಾರೆ.
ಮಂಗಳವಾರ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತವಾಗಿ 1991ರ ಜನಗಣತಿಯ ಪ್ರಕಾರವಾಗಿ ಗ್ರಾಮ ಪಂಚಾಯ್ತಿ ರಚನೆಯಾಗಿ ಕಾರ್ಯನಿರ್ವಹಿಸುತ್ತಿದ್ದು, 2011ರ ಜನಗಣತಿ ಆಧಾರದ ಮೇಲೆ ಗ್ರಾಮ ಪಂಚಾಯ್ತಿ ಪುನರ್ ವಿಂಗಡಣೆ ಮಾಡಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಪ್ರವಾಸ ಕೈಗೊಂಡು, ಆಯಾ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯ್ತಿ ಪುನರ್ ವಿಂಗಡಣೆ ಬೇಡಿಕೆ ಕುರಿತಾಗಿ ಅರ್ಜಿ, ಅಹವಾಲು ಆಹ್ವಾನಿಸಿದ್ದು, ಈಗಾಗಲೇ 12 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಅರ್ಜಿ ಪಡೆಯುತ್ತಿದ್ದು, 17 ಅರ್ಜಿ ಸಲ್ಲಿಕೆಯಾಗಿವೆ ಎಂದು ತಿಳಿಸಿದರು.
ಪಪಂಗೆ ಶಿಫಾರಸು: 5ರಿಂದ 7 ಸಾವಿರ ಜನಸಂಖ್ಯೆಯುಳ್ಳ ಗ್ರಾಮ ಪಂಚಾಯ್ತಿಯನ್ನು ಯಥಾವತ್ತಾಗಿ ಉಳಿಸಿ, ಇದಕ್ಕಿಂತ ಜನಸಂಖ್ಯೆ ಮೇಲ್ಪಟ್ಟ, ಸಾರಿಗೆ ವ್ಯವಸ್ಥೆ ತೊಂದರೆಯಾಗುವ ಆರೇಳು ಕಿ.ಮೀ. ದೂರವಿರುವ ಅಂಶಗಳನ್ನು, ಅಭಿವೃದ್ಧಿ, ಆಡಳಿತಾತ್ಮಕ ವಿಷಯ ಸೇರಿದಂತೆ ಇತರ ವಿಷಯಗಳನ್ನು ನೋಡಿಕೊಂಡು ಗ್ರಾಮ ಪಂಚಾಯ್ತಿಗಳ ಪುನರ್ ವಿಂಗಡಣೆ ಮಾಡಲಾಗುತ್ತದೆ. ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದಲ್ಲಿ 11,800 ಜನಸಂಖ್ಯೆ ಇದ್ದು, ಇದನ್ನು ಪಟ್ಟಣ ಪಂಚಾಯ್ತಿ ಘೋಷಣೆ ಮಾಡಬೇಕೆಂದು ಅರ್ಜಿ ಸಲ್ಲಿಸಲಾಗಿದೆ. ನಿಯಮಗಳ ಪ್ರಕಾರ ಒಂದೇ ಊರಿನಲ್ಲಿ 10 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದಲ್ಲಿ ಇನ್ನಿತರೆ ಅಂಕಿ-ಸಂಖ್ಯೆ ಅಂಶಗಳು ಸಮರ್ಪಕವಾಗಿದ್ದಲ್ಲಿ ಅದನ್ನು ಪಟ್ಟಣ ಪಂಚಾಯತಿ ಮಾಡಲು ಶಿಫಾರಸು ಮಾಡಲಾಗುವುದು. ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ 30 ಸಾವಿರ ಜನಸಂಖ್ಯೆ ಇರುವ ಪಟ್ಟಣಗಳು ಗ್ರಾಮ ಪಂಚಾಯ್ತಿ ಆಗಿವೆ. ಇಂತಹ ಪಂಚಾಯ್ತಿಗಳನ್ನು ಗುರುತಿಸಿ, ಪಟ್ಟಣ ಪಂಚಾಯ್ತಿ ಮೇಲ್ದರ್ಜೇಗೇರಿಸಲು ಶಿಫಾರಸು ಮಾಡಲಾಗುತ್ತದೆ. ಇಂತಹ ಪಟ್ಟಣವು ಹಗರಿಬೊಮ್ಮನಗಳ್ಳಿ ಗ್ರಾಮ ಪಂಚಾಯ್ತಿ ಸೇರಿದಂತೆ ರಾಜ್ಯದ ನಾಲ್ಕೈದು ನಗರಗಳಿವೆ ಎಂದು ತಿಳಿಸಿದರು.
ಅರ್ಜಿ ಪರಿಶೀಲಿಸಿ ಶಿಫಾರಸು: ಅರ್ಜಿ ಸಲ್ಲಿಸಲು ಮಾಸಾಂತ್ಯದವರೆಗೂ ಕಾಲಾವಕಾಶವಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮಗಳ ಸೇರ್ಪಡೆ, ಪುನರ್ ವಿಂಗಡಣೆ, ಕೇಂದ್ರ ಸ್ಥಾನ ಬದಲಾವಣೆ ಇತ್ಯಾದಿ ಅಂಶಗಳನ್ನು ಅರ್ಜಿದಾರರು ವಿವರಿಸಿದ್ದಾರೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ. ರಾಜಾಪುರ, ಮೆಟ್ರಿ, ಚೌಡಾಪುರ ಮತ್ತಿತರ ಗ್ರಾಮಸ್ಥರು ಈ ಗ್ರಾಮಗಳಲ್ಲಿ ಗ್ರಾಮ ಪಂಚಾಯತಿ ಸ್ಥಾಪಿಸಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಅವುಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯ್ತಿ ಪುನರ್ ವಿಂಗಡಣೆ ಸಮಿತಿ ಸದಸ್ಯರಾದ ಎ.ಆರ್. ಸುಧಾರಾಣಿ, ಬಿ.ಸಿ. ಶಿವಾನಂದ್, ಎಸ್.ಕೆ. ಭಾಗವತ, ಕಾರ್ಯದರ್ಶಿಗಳಾದ ಗಣೇಶ್ ಪ್ರಸಾದ್, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸುನಂದಾಬಾಯಿ, ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ನಂದೀಶ್ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.