ಪರಿಸರ ಜಾಗೃತಿ ಅಭಿಯಾನಕ್ಕೆ ಚಾಲನೆ

Updated on: 

ಹಗರಿಬೊಮ್ಮನಹಳ್ಳಿ: ಬಿಸಿಲ ಬೇಗೆಯಿಂದ ಉರಿವ ಬಳ್ಳಾರಿಯನ್ನು ಕೂಲ್, ಕೂಲ್ ಬಳ್ಳಾರಿಯನ್ನಾಗಿಸುವುದು ನಮ್ಮ ಸಂಸ್ಥೆಯ ಉದ್ದೇಶ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಪ್ರತಿವರ್ಷ ಒಂದು ಲಕ್ಷಕ್ಕೂ ಅಧಿಕ ಸಸಿಗಳನ್ನು ಉಚಿತವಾಗಿ ವಿತರಣೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಭಿಯಾನಕ್ಕೆ ಕೈಜೋಡಿಸುವಂತೆ ಹೊಸಪೇಟೆ ನಾಗರಿಕ ಹಿತರಕ್ಷಣಾ ಸೇವಾ ಸಂಘದ ಗೌರವಾಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಕುರಿ ಶಿವಮೂರ್ತಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ ಮುಂಜಾನೆ ಹಗರಿಬೊಮ್ಮನಹಳ್ಳಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಾಗರಿಕ ಹಿತರಕ್ಷಣಾ ಸೇವಾ ಸಂಘ ಸ್ಥಳೀಯ ಶ್ರೀದುರ್ಗಾ ಮಾರುತಿ ಗರಡಿ ಗೆಳೆಯರ ಬಳಗದ ಆಶ್ರಯದಲ್ಲಿ ಆಯೋಜಿಸಿದ್ದ ಸಾರ್ವಜನಿಕರಿಗೆ ಉಚಿತ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಸಸಿ ಉಡಿತುಂಬುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ದುಡಿಮೆಯಿಂದ ಬರುವ ಲಾಭಂಶದಲ್ಲಿ ಒಂದು ಭಾಗವನ್ನು ಪರಿಸರ ಸಂರಕ್ಷಣೆಗಾಗಿ ಮೀಸಲಿಟ್ಟಿದ್ದೇವೆ. ಕೇವಲ ಬಾಯಿಮಾತಿನಲ್ಲಿ ಪರಿಸರ ಸಂರಕ್ಷಣೆಯಾಗದು ಎಂದು ಭಾವಿಸಿರುವ ನಾವು, ಈಗ ವಿವಿಧ ಜಾತಿಗಳಿಗೆ ಸೇರಿದ ಸಸಿಗಳನ್ನು ಪ್ರತಿ ತಾಲೂಕಿಗೂ ಒಂದು ಲಕ್ಷದಷ್ಟು ಉಚಿತವಾಗಿ ಹಂಚಿಕೆಮಾಡಿ ಜನರಲ್ಲಿ ಗಿಡಗಳನ್ನು ಬೆಳೆಸಿ ಕಾಪಾಡುವ ಜಾಗೃತಿ ಅಭಿಯಾನವನ್ನು ಅರಂಭಿಸಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಬೇವು, ಆಲ, ತೇಗ, ಹುಣಸೆ, ಮಾವು, ಕರಿಬೇವು, ಪೇರಲ, ನೆರಳೆ ಸೇರಿದಂತೆ ವಿವಿಧ ಹಣ್ಣಿನ, ಹಿತ್ತಲಮದ್ದಿನ ಔಷಧಿ ಗುಣವುಳ್ಳ ಸಸಿಗಳು ಸೇರಿದಂತೆ ಹಲವು ಜಾತಿ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ಜನತೆ ಮುಗಿಬಿದ್ದು ಸಸಿಗಳನ್ನು ಪಡೆದುಕೊಂಡರು.
ನಾಗರಿಕ ಹಿತರಕ್ಷಣಾ ಸೇವಾ ಸಂಘದ ಅಧ್ಯಕ್ಷ ಕಸಿಟ್ಟಿ ಉಮಾಪತಿ, ಹಿರಿಯ ನಾಗರಿಕರಾದ ದಾದಮ್ಮನವರ ಸಣ್ಣಹುಲುಗಪ್ಪ, ಜಿ.ನೀಲಪ್ಪ, ಸತ್ಸಂಗ ಸಮಿತಿ ಅಧ್ಯಕ್ಷ ಜಿ. ಲಕ್ಷ್ಮಿಪತಿ, ವಾಲ್ಮೀಕಿ ಸಂಘದ ಅಧ್ಯಕ್ಷ ಡಿಶ್ ಮಂಜುನಾಥ, ಶ್ರೀದುರ್ಗಾ ಮಾರುತಿ ಗರಡಿ ಗೆಳೆಯರ ಬಳಗ ಗೌರವಾಧ್ಯಕ್ಷ ಸೆರೆಗಾರ ಹುಚ್ಚಪ್ಪ, ಅಧ್ಯಕ್ಷ ವಿ. ಹುಲುಗಪ್ಪ, ಕಾರ್ಯದರ್ಶಿ ಜೋಗಿ ಹನುಮಂತಪ್ಪ, ಚಿಗರಿ ಮಾರುತಿ, ಕರವೇ ಅಧ್ಯಕ್ಷ ಬುಡ್ಡಿ ಬಸವರಾಜ, ಹನುಮೇಶ ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com