ಬಳ್ಳಾರಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಪರ ಬಿಜೆಪಿ ನಗರ ಘಟಕದ ಕಾರ್ಯಕರ್ತರು ಸ್ಥಳೀಯ ವಿವಿಧ ಕಾಲೇಜುಗಳಲ್ಲಿ ಇತ್ತೀಚೆಗೆ ಪ್ರಚಾರ ನಡೆಸಿದರು. ಘಟಕದ ಅಧ್ಯಕ್ಷ ಕೆ.ಎ. ವೇಮಣ್ಣ ನೇತೃತ್ವದಲ್ಲಿ ಸ್ಥಳೀಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಹಾಗೂ ಪ್ರೌಢಶಾಲೆಗೆ ಭೇಟಿ ನೀಡಿದ ಕಾರ್ಯಕರ್ತರು, ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಅವರನ್ನು ಬಹುಮತದೊಂದಿಗೆ ಆರಿಸಿ ವಿಧಾನ ಪರಿಷತ್ಗೆ ಕಳುಹಿಸಿಕೊಡಬೇಕೆಂದು ಶಿಕ್ಷಕರಲ್ಲಿ ಮನವಿ ಮಾಡಿದರು.
ಮೂರು ಅವಧಿಗಳಲ್ಲೂ ಗೆಲ್ಲುತ್ತ ಬಂದಿರುವ ನಮೋಶಿ ಅವರು, ಈ ಬಾರಿಯೂ ಗೆಲುವು ಸಾಧಿಸಿದಲ್ಲಿ ಪ್ರೌಢಶಾಲೆ ಸಹ ಶಿಕ್ಷಕರ 75:25 ಅನುಪಾತದ ಮುಖ್ಯಗುರುಗಳ ಬಡ್ತಿ, ಮೊರಾರ್ಜಿ ದೇಸಾಯಿ ಶಿಕ್ಷಕರ ಸೇವೆ ಕಾಯಂ, ವರ್ಗಾವಣೆ ಲೋಪದೋಷ, ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಉಪನ್ಯಾಸಕರಿಗೆ ಎಐಸಿಟಿಇ ವೇತನ ಶ್ರೇಣಿ ವಿಸ್ತರಣೆ ಇನ್ನಿತರ ಸಮಸ್ಯೆಗಳ ನಿವಾರಣೆ ಶ್ರಮಿಸಲಿದ್ದಾರೆ ಎಂದರು.
ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಕೆ.ಆರ್. ಮಲ್ಲೇಶ್ ಕುಮಾರ್, ಎಂ. ಮಲ್ಲಿಕಾರ್ಜುನಗೌಡ ಇತರರಿದ್ದರು.