ಬಳ್ಳಾರಿ: ರಸ್ತೆ ಸಾರಿಗೆ ಸಂಸ್ಥೆಯ ಹೊಸಪೇಟೆ ವಿಭಾಗದಲ್ಲಿ ಕಾರ್ಮಿಕರ ಮೇಲೆ ಮೇಲಧಿಕಾರಿಗಳಿಂದ ನಡೆಯುತ್ತಿರುವ ನಿರಂತರ ಕಿರುಕುಳ, ದೌರ್ಜನ್ಯ ಖಂಡಿಸಿ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘದಿಂದ ಹೋರಾಟ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಕೆ. ವಿಜಯ್ ಕುಮಾರ್ ತಿಳಿಸಿದ್ದಾರೆ. ಕಾರ್ಮಿಕರ ಮೇಲೆ ಅಧಿಕಾರಿಗಳ ಕಿರುಕುಳ, ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಹಗಲು- ರಾತ್ರಿ ಕರ್ತವ್ಯ ನಿರ್ವಹಿಸುವ ಬಸ್ ಚಾಲಕರಿಗೆ ವಿಶ್ರಾಂತಿ ನೀಡದೆ ಕೆಲಸ ಮಾಡಿಸಲಾಗುತ್ತದೆ. ಕೇಳದಿದ್ದಲ್ಲಿ ಕಿರುಕುಳ ನೀಡಲಾಗುತ್ತದೆ. ರಜೆ ಕೇಳಿದ ಇಲಾಖೆಯ 600 ಕಾರ್ಮಿಕರ ಪೈಕಿ ಕೇವಲ 300 ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಿದ್ದು, ಇನ್ನುಳಿದ 300 ಕಾರ್ಮಿಕರಿಗೆ ದಿನಕ್ಕೆ 500ರಂತೆ ದಂಡ ವಿಧಿಸಲಾಗಿದೆ ಎಂದು ಆರೋಪಿಸಿದ್ದಾರೆ.