ಬಳ್ಳಾರಿ: ಸ್ಥಳೀಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಜೂ. 13ರಿಂದ 15ರ ವರೆಗೆ ರಾಜ್ಯಮಟ್ಟದ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಪ್ರಸಾದ್ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸೋಸಿಯೇಷನ್ನ ಸದಸ್ಯ, ಹಿರಿಯ ಆಟಗಾರ ಆಕುಲ ಸೂರ್ಯನಾರಾಯಣ ಸ್ಮರಣಾರ್ಥ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಜೂ. 13ರಂದು ಅವರ ಕುಟುಂಬದ ಸದಸ್ಯರೇ ಉದ್ಘಾಟಿಸಲಿದ್ದಾರೆ. ಜೂ. 15ರಂದು ಫೈನಲ್ ಪಂದ್ಯ ಜರುಗಲಿದೆ ಎಂದು ತಿಳಿಸಿದರು.
ಕ್ರೀಡಾಕೂಟದಲ್ಲಿ ಲೀಗ್ ಮತ್ತು ನಾಕೌಟ್ ಪದ್ಧತಿಯಲ್ಲಿ ಪಂದ್ಯಗಳು ನಡೆಯಲಿವೆ. ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರು. 25 ಸಾವಿರ, ದ್ವಿತೀಯ ರು. 15 ಸಾವಿರ, ತೃತೀಯ ರು. 10 ಸಾವಿರ, ನಾಲ್ಕನೇ ಬಹುಮಾನ ರು. 5 ಸಾವಿರ ವಿತರಿಸಲಾಗುವುದು ಎಂದರು.
ರಾಜ್ಯದ ಮೈಸೂರು, ಬೆಂಗಳೂರು, ಹಾಸನ, ಚಾಮರಾಜನಗರ, ತುಮಕೂರು, ಮೂಡಬಿದಿರೆ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಳ್ಳಕೆರೆ, ಕೊಪ್ಪಳ, ರಾಯಚೂರು, ಶ್ರೀರಂಗಪಟ್ಟಣ, ಹುಬ್ಬಳ್ಳಿ, ಬಳ್ಳಾರಿ ಸೇರಿ ಒಟ್ಟು 12 ಜಿಲ್ಲೆ, ಮೂರು ತಾಲೂಕುಗಳಿಂದ 20 ತಂಡಗಳು ಆಗಮಿಸಲಿವೆ. ಎಲ್ಲ ವಯೋವುತಿಯ ಕ್ರೀಡಾಪಟುಗಳು ಭಾಗವಹಿಸಬಹುದು. ವಿದ್ಯಾರ್ಥಿಗಳು, ಸರ್ಕಾರಿ, ಖಾಸಗಿ ಸಂಸ್ಥೆಗಳ ನೌಕರರು, ವಿವಿಧ ಕ್ಲಬ್ಗಳ ಸದಸ್ಯರು, ರಾಜ್ಯ -ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ತಂಡಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರಿಸಿದರು. ಅಸೋಸಿಯೇಷನ್ ಅಧ್ಯಕ್ಷ ನವೀನ್ ರಾವ್, ಉಪಾಧ್ಯಕ್ಷ ಮಾಬುಸಾಬ್, ಖಜಾಂಚಿ ಪ್ರೇಮ್ಬಾಬು, ಉಪ ಕಾರ್ಯದರ್ಶಿ ಶಂಕರ್ ಇದ್ದರು.