ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 9
ಕೆಐಎಡಿಬಿಯು ಬಳ್ಳಾರಿ ತಾಲೂಕಿನ ಕುಡತಿನಿ ಗ್ರಾಮದಲ್ಲಿ ಉದ್ದೇಶಿತ ಆರ್ಸೆಲರ್ ಮಿತ್ತಲ್ ಉಕ್ಕಿನ ಕಾರ್ಖಾನೆಯ ಸ್ಥಾಪನೆಗಾಗಿ ವಶಪಡಿಸಿಕೊಂಡಿದ್ದ ಜಮೀನಿಗೆ ಸೋಮವಾರ ತಂತಿ ಬೇಲಿ ನಿರ್ಮಿಸುವ ಕಾರ್ಯವನ್ನು ಸಂಸ್ಥೆಯ ಪ್ರತಿನಿಧಿಗಳು ಬಂದೋಬಸ್ತ್ನಲ್ಲಿ ಆರಂಭಿಸಿದರು.
ತಂತಿ ಬೇಲಿ ನಿರ್ಮಾಣ ಕಾರ್ಯಕ್ಕೆ ಕುಡತಿನಿ ಹಾಗೂ ಹರಗಿನಡೋಣಿ ಗ್ರಾಮಗಳ ಭೂ ಸಂತ್ರಸ್ತರು ತಡೆಯೊಡ್ಡಬಹುದು, ಪ್ರತಿಭಟನೆ ನಡೆಸಬಹುದು ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಬಳ್ಳಾರಿ ಗ್ರಾಮೀಣ ಠಾಣೆಯ ಡಿವೈಎಸ್ಪಿ ರುದ್ರಮುನಿ ನೇತೃತ್ವದಲ್ಲಿ ಕುರುಗೋಡು ಸಿಪಿಐ ಲಕ್ಷ್ಮೀಕಾಂತಯ್ಯ, ಗ್ರಾಮೀಣ ಠಾಣೆಯ ವ್ಯಾಪ್ತಿಯ ಕುಡತಿನಿ, ಕುರುಗೋಡು, ತೆಕ್ಕಲಕೋಟೆ, ಸಿರಿಗೇರಿ, ಪಿಡಿಹಳ್ಳಿ ಠಾಣೆಗಳ ಪಿಎಸ್ಐಗಳು, ಮುಖ್ಯ ಪೇದೆ, ಪೇದೆಗಳು, 3 ಡಿಎಆರ್ ತುಕಡಿಗಳು ಬಂದೋಬಸ್ತ್ ಏರ್ಪಡಿಸಲಾಗಿತ್ತು.
ರಾಜ್ಯ ಭೂಸಂತ್ರಸ್ತ ಹೋರಾಟ ಸಮಿತಿಯ ನೇತೃತ್ವದಲ್ಲಿ ಕುಡತಿನಿ ಗ್ರಾಮದಿಂದ ನೂರಾರು ಭೂ ಸಂತ್ರಸ್ತ ಪ್ರತಿಭಟನಾಕಾರರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಗೆ ಮುಂದಾದರು. ಆದರೆ ಸ್ಥಳದಲ್ಲಿದ್ದ ತಹಸೀಲ್ದಾರ್ ನಾಗರಾಜ ಪಾಟೀಲ್ ಹಾಗೂ ಡಿವೈಎಸ್ಪಿ ರುದ್ರಮುನಿ ಪ್ರತಿಭಟನಾಕಾರರೊಡನೆ ಮಾತನಾಡಿ, ಕಳೆದ ತಿಂಗಳ 10ರಂದೇ ನಾವು ಭೂ ಸಂತ್ರಸ್ತರ ಹೋರಾಟಕ್ಕೆ ಗೌರವಿಸಿ ನಮ್ಮ ಮೇಲಧಿಕಾರಿಗಳಿಗೆ ವರದಿ ನೀಡಿದ್ದೇವೆ.
ಮಿತ್ತಲ್ ಸಂಸ್ಥೆಯ ಅಧಿಕಾರಿಗಳು ತಂತಿ ಬೇಲಿ ನಿರ್ಮಾಣಕ್ಕೆ ತಮ್ಮ ಸಹಾಯ, ರಕ್ಷಣೆ ಬೇಕೆಂದು ಭಾನುವಾರ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರಿಗೆ ರಕ್ಷಣೆ ನೀಡುತ್ತಿದ್ದೇವೆ ಎಂದು ತಿಳಿಸಿ ಪ್ರತಿಭಟನೆ ನಡೆಸಲು ಅವಕಾಶ ನೀಡಲಿಲ್ಲ. ಆರ್ಸೆಲರ್ ಮಿತ್ತಲ್ ಅಧಿಕಾರಿಗಳು ಪೊಲೀಸರ ಭದ್ರತೆಯಲ್ಲಿ ತಂತಿ ಬೇಲಿ ಹಾಕಲು ಸಿಮೆಂಟ್ ಕಂಬಗಳನ್ನು ಹಾಕುವ ಕೆಲಸ ಆರಂಭಿಸಿದರು.