ಬಳ್ಳಾರಿ: ರಾಜ್ಯ ಸರ್ಕಾರವು ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು ಎಂದು ವಿಧಾನಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಲ್ ಜಿ. ನಮೋಶಿ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಲಿ ಇರುವ ಹುದ್ದೆಗಳನ್ನು ರಾಜ್ಯ ಸರ್ಕಾರವು ಭರ್ತಿ ಮಾಡಿಕೊಳ್ಳುವುದರಿಂದ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಈ ಭಾಗದವರಿಗೆ ಅನುಕೂಲವಾಗುತ್ತದೆ. ಆದರೆ ಸರ್ಕಾರ ಮಾತ್ರ ಜನಪರ ನಿಲುವು ತಾಳದೇ ವಿಳಂಬ ನೀತಿ ಅನುಸರಿಸುತ್ತಿದೆ ಎಂದರು.
ಈ ಹಿಂದಿನ ಬಿಜೆಪಿ ಸರ್ಕಾರ 1991ರಿಂದ 95ರ ವರೆಗಿನ ಅನುದಾನರಹಿತ ಶಾಲಾ-ಕಾಲೇಜುಗಳಿಗೆ ಅನುದಾನ ನೀಡಿದೆ. ಆದರೆ ಬಳಿಕ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ 38 ಶಾಲೆಗಳಿಗೆ ಮಾತ್ರ ಅನುದಾನ ನೀಡಿದೆ. ಇನ್ನು 308 ಶಾಲೆ-ಕಾಲೇಜುಗಳಿಗೆ ಅನುದಾನ ನೀಡದೆ ತಾರತಮ್ಯ ಎಸಗಿದೆ. ಅನುದಾನಿತ ಶಾಲೆ-ಕಾಲೇಜುಗಳಿಗೆ ಸಿಬ್ಬಂದಿಯನ್ನು ಭರ್ತಿ ಮಾಡಿಕೊಳ್ಳುವ ಅವಕಾಶವನ್ನು ಸಹ ನೀಡಿಲ್ಲ ಎಂದು ಆರೋಪಿಸಿದರು.
ಸರ್ಕಾರವು ಪತಿ-ಪತ್ನಿಯರ ವರ್ಗಾವಣೆ ನೀತಿಯಲ್ಲೂ ಸರ್ಕಾರ ಅಜ್ಞಾನ ಪ್ರದರ್ಶಿಸಿದೆ. ರಾಜ್ಯದ 16 ಸಾವಿರ ಪ್ರಕರಣಗಳನ್ನು ಬಾಕಿ ಇಟ್ಟುಕೊಂಡಿದೆ ಎಂದು ದೂರಿದರು. ಬಿಜೆಪಿ ಮುಖಂಡರಾದ ಕೆ.ಎಂ. ಶಿವಕುಮಾರ್, ವೇಮಣ್ಣ, ಬಿ. ಶಿವಕುಮಾರ್, ಯೋಗಾನಾಗರಾಜ್, ಶ್ರೀನಿವಾಸ ಪಾಟೀಲ್, ಕೆ.ಆರ್. ಮಲ್ಲೇಶ್, ಚಂದ್ರ, ಮರಿಸ್ವಾಮಿ ರೆಡ್ಡಿ, ಶಿವಕೃಷ್ಣಮ್ಮ, ಮೆಹಬೂಬ್ಭಾಷ ಇದ್ದರು.