ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜೂ. 13
ತಾಲೂಕು ಆಡಳಿತ ಹಾಗೂ ಬಾಲ ಕಾರ್ಮಿಕ ವಿಶೇಷ ತರಬೇತಿ ಕೇಂದ್ರ ಕಾರ್ಮೆಲ್ ಜ್ಯೋತಿ ಎನ್ಜಿಒ ಸಹಯೋಗದಲ್ಲಿ ಗುರುವಾರ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧಿಶರಾದ ಯಮನಪ್ಪ ಕರೆ ಹನುಮಂತಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 1 ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಜತೆಗೆ ಪಾಲಕರು ಜವಾಬ್ದಾರಿಯಿಂದ ತಮ್ಮ ಮಗುವಿಗೆ ಶಿಕ್ಷಣವನ್ನು ಕೊಡಿಸಿದಾಗ ಬಾಲ ಕಾರ್ಮಿಕ ಪದ್ಧತಿ ಸಮಾಜ ಮುಕ್ತ ಮಾಡಲು ಸಾಧ್ಯ ಎಂದ ಅವರು, ಇಂತಹ ಅನಿಷ್ಠ ಪದ್ಧತಿ ಸಮಾಜಕ್ಕೆ ದೊಡ್ಡ ಕಳಂಕವಾಗಿದ್ದು, ಇದನ್ನು ತೊಡೆದು ಹಾಕಿ ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಪಣತೊಡಬೇಕೆಂದು ಕರೆ ನೀಡಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ. ಕೊಟ್ರುಗೌಡ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆಗಾಗಿ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಇದಕ್ಕೆ ಸಮಾಜದ ಸಹಕಾರ ಅತಿ ಅವಶ್ಯಕವಾಗಿದ್ದು, ಎಲ್ಲರು ಕೈ ಜೋಡಿಸಿದಾಗ ಮಾತ್ರ ಈ ಕಳಂಕಿತ ಪದ್ದತಿಯನ್ನು ನಾಶಮಾಡಲು ಸಾದ್ಯ ಎಂದರು
ಇದೇ ಸಂದರ್ಭದಲ್ಲಿ ಬಸ್ ನಿಲ್ದಾಣದಿಂದ ಶಾಸ್ತ್ರೀ ವೃತ್ತದವರೆಗೆ ವಿದ್ಯಾರ್ಥಿಗಳು ಘೋಷಣೆ ಕೂಗುತ್ತಾ, ಬಾಲಕಾರ್ಮಿಕ ಪದ್ದತಿ ಗೀತೆಗಳನ್ನು ಹಾಡಿ ಬಾಲಕಾರ್ಮಿಕ ಪದ್ದತಿಯ ನಿರ್ಮೂಲನೆಗಾಗಿ ಜನರಲ್ಲಿ ಜಾಗೃತಿ ಮೂಡಿಸಿದರು.
ತಹಸೀಲ್ದಾರ್ ವಿಶ್ವಜಿತ್ ಮೆಹತಾ, ಕಾರ್ಮಿಕ ಅಧಿಕಾರಿ ರವಿಕುಮಾರ, ಬಿಇಒ ಜಿ. ಕೊಟ್ರೇಶ, ಇಒ ಡಾ. ರಂಗಪ್ಪ, ಫಾ. ರಾಜೇಶ ಡಿಸೋಜ್, ಪಿ.ಬಿ. ನಾಯ್ಕ, ಸಿಪಿಐ ಪ್ರಕಾಶ ರಾಠೋಡ್, ಪಿಎಸ್ಐ ಅಂಜಿನೇಯ, ವಕೀಲರಾದ ಸಿ.ಕೆ.ಎಂ. ಬಸವಲಿಂಗಯ್ಯ, ಶಿಕ್ಷಕರಾದ ರಮೇಶ್, ಎಂ. ದಯಾನಂದ ಸೇರಿದಂತೆ ಇತರರಿದ್ದರು.