ಕನ್ನಡಪ್ರಭ ವಾರ್ತೆ, ಕೊಟ್ಟೂರು, ಏ. 15
ಹಲವು ವೈಶಿಷ್ಟ್ಯಗಳಿಗೆ ಹೆಸರಾಗಿರುವ ಕೊಟ್ಟೂರು ಪಟ್ಟಣ ಈಗ ಬೆಣ್ಣೆ ವಹಿವಾಟಿಗೂ ಪ್ರಸಿದ್ಧಿ ಪಡೆಯುತ್ತಿದೆ. ಬೆಣ್ಣೆ ಮಾರುಕಟ್ಟೆ ನಿಧಾನವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ.
ಅಪ್ಪಟ ಗ್ರಾಮೀಣ ಸೊಗಡಿನ ಬೆಣ್ಣೆ ಇದೀಗ ವಿವಿಧ ಹೆಸರಿನ, ಪ್ರತಿಷ್ಠಿತ ಬ್ರಾಂಡ್ನ ತುಪ್ಪದ ರೂಪದಲ್ಲಿ ಮಾರಾಟವಾಗುತ್ತಿದೆ. ಅವಸರದ ಜೀವನಕ್ಕೆ ಅಂಟಿಕೊಂಡಿರುವ ಈಗಿನ ಜನ ಬೆಣ್ಣೆ ತಂದು ಕಾಯಿಸಿ, ತುಪ್ಪ ಮಾಡಿಕೊಳ್ಳುವಷ್ಟು ಪುರುಸೊತ್ತು ಹೊಂದಿಲ್ಲ. ಸಿದ್ಧ ತುಪ್ಪದ ಮೊರೆ ಹೋಗುತ್ತಾರೆ.
ಕೊಟ್ಟೂರಿನಲ್ಲಿ ಪ್ರತಿ ಗುರುವಾರ ನಡೆಯುವ ವಾರದ ಸಂತೆಯಲ್ಲಿ ಬೆಣ್ಣೆ ವ್ಯಾಪಾರ ಜೋರಾಗಿರುತ್ತದೆ. ಬೆಳಗ್ಗೆಯಿಂದಲೇ ಬೆಣ್ಣೆ ವ್ಯಾಪಾರದ ಭರಾಟೆ ಶುರುವಾಗುತ್ತದೆ. 3 ಕ್ವಿಂಟಲ್ಗೂ ಅಧಿಕ ಪ್ರಮಾಣದ ಬೆಣ್ಣೆ ಪ್ರತಿ ವಾರ ಮಾರಾಟವಾಗುತ್ತದೆ. ಸೇರಿನ ಅಳತೆಯಲ್ಲಿ ಬೆಣ್ಣೆ ವ್ಯಾಪಾರ ನಡೆಯುತ್ತದೆ. ಒಂದು ಸೇರು 424 ಗ್ರಾಂಗೆ ಸಮ. ಕಳೆದ ಗುರುವಾರ ಸೇರು ಬೆಣ್ಣೆ ರು. 120ಕ್ಕೆ ಮಾರಾಟವಾಗಿದೆ.
ಪರಿಶುದ್ಧ ಬೆಣ್ಣೆ: ಕೊಟ್ಟೂರಿನಲ್ಲಿ ಮಾರಾಟ ಮಾಡುವ ಬೆಣ್ಣೆ ಪರಿಶುದ್ಧವಾದದ್ದು. ಕಲಬೆರಕೆ ಕಂಡುಬಾರದ ಹಿನ್ನೆಲೆಯಲ್ಲಿ ಇಲ್ಲಿನ ಬೆಣ್ಣೆ ಖರೀದಿದಾರರ ಮೆಚ್ಚುಗೆ ಗಳಿಸಿದೆ. 3-4 ದಶಕಗಳಿಂದ ಸುತ್ತಮುತ್ತಲಿನ ಹಳ್ಳಿಗರು ಕೊಟ್ಟೂರನ್ನೇ ಕೇಂದ್ರವಾಗಿರಿಸಿಕೊಂಡು ಶುದ್ಧ ಬೆಣ್ಣೆಯನ್ನು ಮಾರಾಟ ಮಾಡಿ ಉತ್ತಮ ಬದುಕು ಸಾಗಿಸತೊಡಗಿದ್ದಾರೆ. ಈ ವ್ಯಾಪಾರ ನಮ್ಮ ಬದುಕಿಗೆ ನೆರವಾಗಿದೆ ಎನ್ನುತ್ತಾರೆ ಹುಣಸಿಹಳ್ಳಿಯ ಮಲ್ಲೇಗೌಡ, ನಿಲುವಂಜಿ ಕೊಟ್ರಪ್ಪ ಹಾಗೂ ಸಾಸ್ವಿಹಳ್ಳಿಯ ಹನುಮಂತಪ್ಪ.
ಕೊಟ್ಟೂರಿನ ಶುದ್ಧ ಬೆಣ್ಣೆ ಬಳ್ಳಾರಿ, ಹೊಸಪೇಟೆ, ಗದಗ, ದಾವಣಗೆರೆ, ಹರಿಹರ, ಚಿತ್ರದುರ್ಗ, ರಾಣಿಬೆನ್ನೂರು, ಚೆಳ್ಳಕೆರೆ, ಬೆಂಗಳೂರು ಮತ್ತಿತರ ಕಡೆ ರವಾನೆಯಾಗುತ್ತದೆ. ರಾಗಿ ಮಾಸಲವಾಡದ ವ್ಯಾಪಾರಿ, ಪ್ರಾಥಮಿಕ ಶಾಲೆ ಶಿಕ್ಷಕರೊಬ್ಬರು ಇಲ್ಲಿ ಬೆಣ್ಣೆ ಖರೀದಿಸಿ ಇತರೆಡೆ ಸಾಗಿಸಿ ಮಾರಾಟ ಮಾಡುವುದನ್ನೇ ಉಪದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ರಾಜಸ್ಥಾನದ ಮಾರ್ವಾಡಿಗಳಿಗೂ ಈ ಬೆಣ್ಣೆ ಸ್ಥಳೀಯ ಮಾರ್ವಾಡಿಗಳಿಂದ ರವಾನೆಯಾಗುತ್ತದೆ.
ಬೆಣ್ಣೆ ಮಾರಾಟಕ್ಕೆ ಸ್ಥಳೀಯ ಎಪಿಎಂಸಿಯವರು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಅಧಿಕೃತ ಬೆಣ್ಣೆ ಮಾರಾಟ, ವಹಿವಾಟು ನಡೆಯಬೇಕು. ಅಷ್ಟಾದರೆ ರೈತರ ಬೆಣ್ಣೆಗೆ ನ್ಯಾಯಯುತ ಬೆಲೆ ಸಿಗುತ್ತದೆ ಎನ್ನುತ್ತಾರೆ ಹೈನುಗಾರ ಮಂಜಪ್ಪ.
-ಜಿ. ಸೋಮಶೇಖರ