ಬೆಂಗಳೂರು: ಬಳ್ಳಾರಿ ಜಿಲ್ಲೆಯ ಶ್ರೀರಾಂಪುರದ ದಲಿತರು ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆಯಡಿ ತಮಗೆ ಸಿಗಬೇಕಾದ ಭೂಮಿಯನ್ನು ಜೂ.29ರಂದು ಉಳುಮೆ ಮಾಡಲು ನಿರ್ಧರಿಸಿದ್ದಾರೆ. ಹಳ್ಳಿಯ 29 ದಲಿತ ಕುಟುಂಬಗಳಿಗೆ 1978ರಲ್ಲಿಯೇ ಸರ್ಕಾರ 229 ಎಕರೆ ಭೂಮಿಯನ್ನು ನೀಡಿತ್ತು. ಆದರೆ ಸ್ಥಳೀಯ ಅಧಿಕಾರಿ ಮತ್ತು ಶಾಸಕರು ಇವರಿಗೆ ವಿಷಯ ತಿಳಿಸದೆ 30 ವರ್ಷಗಳ ಕಾಲ ಇವರಿಂದ ಜೀತ ಮಾಡಿಸುತ್ತಿದ್ದಾರೆ ಎಂದು ದಲಿತ ಸಂಘದ ಹಿರಿಯ ಮುಖಂಡ ಎನ್.ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ಬಳ್ಳಾರಿ ಜಿಲ್ಲೆಯಲ್ಲಿ ಪ್ರಭಾವಿ ರಾಜಕಾರಣಿಗಳಿದ್ದಾರೆ ಮತ್ತು ಅವರು ಇಷ್ಟು ವರ್ಷವೂ ಜೀತ ಪದ್ಧತಿಯನ್ನು ನಡೆಸಿದ್ದಾರೆ. ಆದರೆ ಈಗ ಜನರಿಗೆ ತಿಳಿವಳಿಕೆ ಬಂದಿದೆ. ಆದಕಾರಣ ಸ್ವಂತ ಭೂಮಿ ಪಡೆಯಲು ಈ ಹೋರಾಟ ಎಂದರು. ಗೋಷ್ಠಿಯಲ್ಲಿ ಕರಿಯಪ್ಪ ಗುಡಿಮನಿ, ರಾಮಚಂದ್ರ, ವೆಂಕಟರಮಣ ಉಪಸ್ಥಿತರಿದ್ದರು.
ಬೈಕ್ಗೆ ಡಿಕ್ಕಿ: ಬಸ್ ಸವಾರ ಸಾವು
ಬಳ್ಳಾರಿ: ಖಾಸಗಿ ಬಸ್ ಹಿಂದುಗಡೆಯಿಂದ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಅಲ್ಲೀಪುರ ಸಮೀಪದಲ್ಲಿ ಮಂಗಳವಾರ ನಡೆದಿದೆ. ಮೃತನು ಕಣೇಕಲ್ ಗ್ರಾಮದ ವೆಂಕಟೇಶಲು(35). ಸಂಜೆ ಹೊಸಪೇಟೆಗೆ ಹೋಗುತ್ತಿರುವಾಗ ಹಿಂದುಗಡೆಯಿಂದ ದಾವಣಗೆರೆ ಹೊರಟಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಇನ್ನೊಬ್ಬ ಬೈಕ್ ಸವಾರ ಮಂಜುನಾಥ್ ಗಾಯಗೊಂಡಿದ್ದು, ವಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.