ತುಂಗಭದ್ರಾ ಹೂಳು: ಸಿಎಂ ಜತೆ ಚರ್ಚೆ

Updated on: 

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 18
ತುಂಗಭದ್ರಾ ಜಲಾಶಯದಲ್ಲಿನ ಹೂಳೆತ್ತುವ ಕುರಿತು ಕೇಂದ್ರ ಹಾಗೂ ರಾಜ್ಯದ ಸಚಿವ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಸಂಸದ ಬಿ. ಶ್ರೀರಾಮುಲು ತಿಳಿಸಿದರು.
ತಾಲೂಕಿನ ಮೋಕಾ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯ ಹೂಳು ಕುರಿತು ಈಗಾಗಲೇ ಕೇಂದ್ರ ಸಚಿವೆ ಉಮಾಭಾರತಿಯವರಿಗೆ ಮನವಿ ಸಲ್ಲಿಸಿದ್ದೇವೆ. ತ್ವರಿತವಾಗಿ ಕ್ರಮಕೈಗೊಳ್ಳುವಂತೆ ವಿನಂತಿಸಿದಾಗ ಉಮಾಭಾರತಿಯವರು ಈ ಕುರಿತು ತಮ್ಮ ಬಳಿ ಯಾವುದೇ ಮಾಹಿತಿಯಿಲ್ಲ. ಆದ್ದರಿಂದ ಏನೂ ಹೇಳಲಾಗಲ್ಲ. ಮಾಹಿತಿ ತರಿಸಿಕೊಂಡು ಈ ಕುರಿತು ತಮ್ಮೊಂದಿಗೆ ಚರ್ಚಿಸಲಾಗುವುದು ಎಂದಿದ್ದಾರೆ ಎಂದು ತಿಳಿಸಿದರು. ರಾಜ್ಯದ ನೀರಾವರಿ ಸಚಿವ ಎಂ.ಬಿ. ಪಾಟೀಲರೊಂದಿಗೂ ಚರ್ಚಿಸಿದ್ದೇನೆ. ಆದರೆ, ಜಲಾಶಯದಲ್ಲಿ ತುಂಬಿರುವ 30 ಟಿಎಸಿ ಹೂಳು ತೆಗೆಯುವುದು ಅಷ್ಟು ಸುಲಭವಲ್ಲ. ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕಿದ್ದು, ಸಮಾನಾಂತರ ಜಲಾಶಯಗಳನ್ನು ನಿರ್ಮಿಸುವ ಕುರಿತು ಚಿಂತನೆ ನಡೆಸಬೇಕಿದೆ ಎಂದಿದ್ದಾರೆ ಎಂದರು.
ಸಂಸದರಾಗಿ ಆಯ್ಕೆ ಮಾಡಿದ ಕ್ಷೇತ್ರದ ಮತದಾರರಿಗೆ ಅಭಿನಂದನೆ ತಿಳಿಸಲು ಜಿ.ಪಂ. ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಈ ನಿಟ್ಟಿನಲ್ಲಿ ಮೋಕಾ ಜಿ.ಪಂ. ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಕುಡಿವ ನೀರು, ಶಿಕ್ಷಣ, ಆರೋಗ್ಯ, ಕ್ರೀಡೆ, ಚರಂಡಿ ಸೇರಿದಂತೆ ಗ್ರಾಮಗಳಲ್ಲಿನ ಮೂಲಸೌಕರ್ಯಗಳ ಕುರಿತು ಪಟ್ಟಿ ತಯಾರಿಸಿ ಕೇಂದ್ರದಿಂದ ಬರುವ ಅನುದಾನದಲ್ಲಿ ಮುಂದಿನ ಐದು ವರ್ಷದೊಳಗಾಗಿ ಪೂರ್ಣಗೊಳಿಸಲಾಗುವುದು ಎಂದರು.
ಫ್ಲೋರೈಡ್ ಅಂಶವುಳ್ಳ ಜಿಲ್ಲೆಯಲ್ಲಿ ಕುಡಿವ ನೀರಿನ ಸಮಸ್ಯೆ, ಕೊಟ್ಟೂರು ಭಾಗದಲ್ಲಿ ರೇಲ್ವೆ, ರಸ್ತೆ ಯೋಜನೆ ಸೇರಿ ಹಲವು ನೆನೆಗುದಿಗೆ ಬಿದ್ದಿವೆ. ಇವುಗಳನ್ನು ಮುಂದಿನ ದಿನಗಳಲ್ಲಿ ಪರಿಹರಿಸಲಾಗುವುದು ಎಂದರು. ಇದಕ್ಕೂ ಮುನ್ನ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶ್ರೀರಾಮುಲು, ಗ್ರಾಮೀಣ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ನನಗೆ ಸಕಲ ಅಧಿಕಾರ ನೀಡಬೇಕು ಎಂದು ಕಾರ್ಯಕರ್ತರನ್ನು ಕೇಳಿಕೊಂಡರು. ಪಕ್ಷದ ನಿರ್ಣಯದಂತೆ ವಹಿಸುವ ಜವಾಬ್ದಾರಿಯನ್ನು ನಾನು ಸಕ್ರಿಯವಾಗಿ ನಿಭಾಯಿಸಬೇಕಿದೆ. ಹೀಗಾಗಿ ಕಾರ್ಯಕರ್ತರು ಗೊಂದಲಕ್ಕೀಡಾಗದೆ, ತಮ್ಮ ಕ್ಷೇತ್ರದ ಸಂಪೂರ್ಣ ಜವಾಬ್ದಾರಿಯನ್ನು ನನಗೆ ಬಿಟ್ಟುಕೊಡಬೇಕು ಎಂದರು. ನಂತರ ಸಂಸದರನ್ನು ಕಾರ್ಯಕರ್ತರು ಪೇಟಾ ತೊಡಿಸಿ ಸನ್ಮಾನಿಸಿದರು.
ಪಕ್ಷದ ಮುಖಂಡರಾದ ಗುರುಲಿಂಗನಗೌಡ, ಜಿ.ಪಂ. ಸದಸ್ಯ ಗೋನಾಳ್ ರಾಜಶೇಖರಗೌಡ, ಬಿ.ನಾಗಭೂಷಣಗೌಡ, ಎಪಿಎಂಸಿ ಅಧ್ಯಕ್ಷ ವೀರೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com