ಹೊಸಪೇಟೆ: ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, 14 ಜನರಿಗೆ ತೀವ್ರ ಸ್ವರೂಪದ ಗಾಯಗಳಾಗಿರುವ ಘಟನೆ ತಾಲೂಕಿನ ಪಾಪಿನಾಯಕನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 63 ರಸ್ತೆಯಲ್ಲಿ ಶುಕ್ರವಾರ ನಡೆದಿದೆ.
ತಾಲೂಕಿನ ಪಾಪಿನಾಯಕನಹಳ್ಳಿ ನಿವಾಸಿಗಳಾದ ಹೊನ್ನೂರಪ್ಪ (27) ಮತ್ತು ಗಂಗಮ್ಮ (19) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎಂಕಮ್ಮ (65), ನಾಗಮ್ಮ (40), ಜ್ಯೋತೆಮ್ಮ (42), ನೇತ್ರಮ್ಮ (21), ಭೀಮಕ್ಕ (18), ಮಮತಾ (21), ಹುಲಿಯಪ್ಪ (26), ನಾಗಮ್ಮ (45), ಲಕ್ಷ್ಮಿ (28), ಮುತ್ತಮ್ಮ (28), ಗಾದಿಲಿಂಗಮ್ಮ (19), ಪಾರ್ವತಿ(35), ಹನುಮಂತಿ (20), ತಿಪ್ಪಮ್ಮ (45) ಗಾಯಗೊಂಡಿದ್ದಾರೆ. ಟಾಟಾ ಏಸ್ ವಾಹನದಲ್ಲಿದ್ದ ಎಲ್ಲರೂ ಕಟ್ಟಡ ಕಾರ್ಮಿಕರಾಗಿದ್ದು, ಕೂಲಿ ಕೆಲಸಕ್ಕೆ ಹೊಸಪೇಟೆಗೆ ತೆರಳುವಾಗ ಅಪಘಾತ ನಡೆದಿದೆ. ಗಾಯಗೊಂಡವರನ್ನು ಹೊಸಪೇಟೆಯ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟಾಟಾ ಏಸ್ ವಾಹನದ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.