ತಾಪಂ ಮೀಸಲಾತಿಗೂ ಅಹಿಂದ ನೆರಳು?

Updated on: 

ಕನ್ನಡಪ್ರಭ ವಾರ್ತೆ, ಹಗರಿಬೊಮ್ಮನಹಳ್ಳಿ, ಜೂ. 23
ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಅಹಿಂದ ಎಫೆಕ್ಟ್‌ಬಲುಜೋರಾಗಿದೆ. ಹಗರಿಬೊಮ್ಮನಹಳ್ಳಿ ತಾಲೂಕು ಪಂಚಾಯ್ತಿಯ ಮೂರನೇ ಅವಧಿಯ ಅಧ್ಯಕ್ಷ ಹುದ್ದೆಯ ಮೀಸಲಾತಿ ಮೇಲೂ ಅಹಿಂದ ಪ್ರಭಾವ ಬೀರಿದೆ. ಅಹಿಂದ್ ವರ್ಗಕ್ಕೆ ಸೇರಿದ ಮಹಿಳಾ ಅಭ್ಯರ್ಥಿಗಳಿಗೆ ತಾಪಂ ಅಧ್ಯಕ್ಷ ಹುದ್ದೆಗೇರುವ ಭಾಗ್ಯವನ್ನು ಅಹಿಂದ ಮಂತ್ರ ಕರುಣಿಸಿದೆ.
ಈ ಮೊದಲ ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ತಾಪಂ ಅಧ್ಯಕ್ಷ ಹುದ್ದೆ, ಈಗ ಇದ್ದಕ್ಕಿದಂತೆಯೇ ಹಿಂದುಳಿದ ವರ್ಗದ ಮಹಿಳೆಗೆ ಬದಲಾಗಿದೆ. ಈ ಸಂಬಂಧ ಇಲ್ಲಿನ ತಾಪಂ ಕಚೇರಿಗೆ ಮೀಸಲು ಅದಲು-ಬದಲಾಗಿರುವ ಆದೇಶದ ಪ್ರತಿ ಬಂದಿದೆ. ಆದೇಶ ಪ್ರತಿ ಬಹಿರಂಗವಾಗುತ್ತಿದ್ದಂತೆಯೇ ವೀರಶೈವರನ್ನು ಅಧಿಕಾರದಿಂದ ದೂರವಿಡಲು ಸರ್ಕಾರ ಮೀಸಲನ್ನು ದುರುಪಯೋಗಪಡಿಸಿಕೊಂಡಿತೆ ಎಂಬ ಶಂಕೆ ಸಾರ್ವಜನಿಕರಲ್ಲಿ ಮೂಡಿದೆ. ಈ ಅಂಶವೇ ಶನಿವಾರ ಇಡೀದಿನ ತಾಲೂಕಿನಾದ್ಯಂತ ಸಾರ್ವಜನಿಕರ ಚರ್ಚೆಗೆ ಇಂಬು ಮಾಡಿಕೊಟ್ಟಿತ್ತು.
ಉರಿಯುವ ಬೆಂಕಿಗೆ ತುಪ್ಪ
ಮೊದಲು ಪ್ರಕಟವಾಗಿದ್ದ ಮೀಸಲನ್ನು ಈಗ ಏಕಾಏಕಿ ಬದಲಿಸಿರುವ ಆದೇಶ ತಾಲೂಕಿನಲ್ಲಿ ಪ್ರಬಲರಾಗಿರುವ ವೀರಶೈವರಲ್ಲಿ ಸಾಕಷ್ಟು ಅಸಮಾಧಾನ ಹುಟ್ಟಿಗೆ ಎಡೆಮಾಡಿಕೊಟ್ಟಿದೆ.
ಉಪಾಧ್ಯಕ್ಷ ಹುದ್ದೆಗೆ ಸೀಮಿತ
 ಯಾಕೆಂದರೆ ಮೊದಲ ಅವಧಿಯಲ್ಲಿ ಉಪಾಧ್ಯಕ್ಷ ಹುದ್ದೆ ಬಿಟ್ಟರೆ ವೀರಶೈವರಿಗೆ ಯಾವುದೆ ಹುದ್ದೆಗಳು ತಾಲೂಕಿನಲ್ಲಿ ಸಿಕ್ಕಿಲ್ಲ. ಎರಡನೇ ಅವಧಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಸಂದರ್ಭದಲ್ಲೂ ವೀರಶೈವ ಅಭ್ಯರ್ಥಿಯನ್ನು ಕಡೆಗಣಿಸಿ, ಆ ಹುದ್ದೆಗೆ ಪರಿಶಿಷ್ಟ ಜಾತಿಯ ಮಹಿಳೆಯನ್ನು ತಂದು ಕೂಡಿಸಲಾಗಿತ್ತು. ಹೀಗಾಗಿ ಏಪ್ರಿಲ್ ತಿಂಗಳಿನಲ್ಲಿ  ಸಾಮಾನ್ಯ ವರ್ಗಕ್ಕೆ ಮೀಸಲು ಪ್ರಕಟಗೊಂಡ ವೇಳೆ ತಾಪಂ ಅಧ್ಯಕ್ಷ ಹುದ್ದೆ ಈ ಸಲವಾದರೂ ವೀರಶೈವರಿಗೆ ಸಿಗಲಿದೆ ಎಂಬ ವಾತಾವರಣ ಸೃಷ್ಟಿಯಾಗಿತ್ತು.
16 ಸದಸ್ಯ ಬಲದ ಈ ತಾಪಂನಲ್ಲಿ ಹತ್ತು ಸದಸ್ಯ ಬಲವುಳ್ಳ ಕಾಂಗ್ರೆಸ್ ಎರಡು ಅವಧಿಯಿಂದಲೂ ಅಧಿಕಾರದಲ್ಲಿದೆ.  ಆಡಳಿತರೂಢ ಕಾಂಗ್ರೆಸ್‌ನಲ್ಲಿ ಮೂವರು ವೀರಶೈವ ಸದಸ್ಯರಿದ್ದು, ಅಧ್ಯಕ್ಷ ಹುದ್ದೆಗೇರಲು ಇವರು ಮಂತ್ರಿ, ಪಕ್ಷದ ಶಾಸಕರ ಬಳಿಯಲ್ಲಿ ಸಾಕಷ್ಟು ಕಸರತ್ತು ನಡೆಸಿದ್ದರು. ಆದರೆ, ಈಗ ಏಕಾಏಕಿ ಮೀಸಲು ಅದಲು-ಬದಲಾಗಿರುವುದು ಇವರ ಮುಖದಲ್ಲಿ ಅಸಮಾಧಾನ ಬುಗಿಲೇಳುವಂತೆ ಮಾಡಿದೆ.
ವೀರಶೈವರನ್ನು ಉದ್ದೇಶಪೂರ್ವಕವಾಗಿಯೇ ಅಧಿಕಾರದಿಂದ ದೂರವಿಡಲು ಷಡ್ಯಂತ್ರ ನಡೆಯುರುವುದು ತಾಪಂ ಅಧ್ಯಕ್ಷ ಸ್ಥಾನದ ಮೀಸಲು ಅದಲು-ಬದಲು ಪ್ರಕರಣ ಇದನ್ನು ಪುಷ್ಟೀಕರಿಸಿದೆ ಎಂದು ಈ ಸಮಾಜದ ಹಲವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
  ಈ ಮಧ್ಯೆ ಅದಲು-ಬದಲು ಮೀಸಲು ಪಕ್ಷದೊಳಗಡೆ ಭಿನ್ನಮತ ಸೃಷ್ಟಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಯಾಕೆಂದರೆ ಇದು ಕೊನೆಯ ಅವಧಿ. ಹೀಗಾಗಿ ಅಧ್ಯಕ್ಷ ಹುದ್ದೆಯ ಆಯ್ಕೆ ವೇಳೆ ಈ ಭಿನ್ನಮತ ಸ್ಫೋಟಗೊಳ್ಳುವ ಲಕ್ಷಣಗಳು ಈಗಾಗಲೇ ಗೋಚರಿಸಿವೆ. ಈ ಸಲವೂ ಅದು ಪುನಾರವರ್ತನೆಯಾಗುವುದೇ ಎಂಬ ಕುತೂಹಲ ಸಾರ್ವಜನಿಕರಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com