ಬಿಡಾಡಿ ದನಗಳ ಉಪಟಳ

Updated on: 

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 24
ನಗರದಲ್ಲಿ ಬಿಡಾಡಿ ದನಗಳ ಉಪಟಳ ಅಂಗಡಿ ಮುಂಗಟ್ಟಿನವರು, ಅದರಲ್ಲೂ ಕಾಯಿಪಲ್ಲೆ ವ್ಯಾಪಾರಿಗಳಿಗೆ ತಲೆನೋವಾಗಿದೆ. ಕೆಲ ಕಡೆಗಳಲ್ಲಿ ಬಿಡಾಡಿ ದನ ರಸ್ತೆಯಲ್ಲಿಯೇ ವಿರಮಿಸುವುದು ಕಾಣುತ್ತೇವೆ.
ಮಹಾನಗರದ ಯಾವುದೇ ಬಡಾವಣೆಗಳಿಗೆ ಹೋದರೂ ಬಿಡಾಡಿ ದನಗಳ ದರ್ಶನವಾಗುತ್ತದೆ. ವಾರಸುದಾರರು ಇದ್ದರೂ ಅವುಗಳ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಯಾವುದೇ ವೆಚ್ಚವಿಲ್ಲದೆ ಮೇವು ಸೇರಿದಂತೆ ಪೌಷ್ಟಿಕ ಆಹಾರ ಸಿಗುವುದರಿಂದ ದನಗಳ ಒಡೆಯರಿಗೆ ಅವುಗಳ ಮೇವಿನ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬಿಡಾಡಿ ದನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಸಾಗಿದೆ.
ನಗರದಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಕಾಯಿಪಲ್ಲೆ ಮಾರುಕಟ್ಟೆ, ಹಣ್ಣು ಮಾರುಕಟ್ಟೆಗಳಲ್ಲಿ ರಸ್ತೆಯ ಬದಿಯಲ್ಲಿರುವ ಹಣ್ಣು, ತರಕಾರಿ, ಕಿರಾಣಿ ಅಂಗಡಿಗಳಿಗೆ, ಹಣ್ಣಿನ ಬಂಡಿಗಳಿಗೆ ದೊಡ್ಡ ಕಿರಿಕಿರಿಯಾಗಿದೆ. ಇದರಿಂದಾಗಿ ವ್ಯಾಪಾರಸ್ಥರು ಬಿಡಾಡಿ ದಿನಗಳಿಗೆ ಹಿಡಿಶಾಪ ಹಾಕುತ್ತಾರೆ.
ನಗರದಲ್ಲಿ ಕೆಲವು ಕಡೆಗಳಲ್ಲಿ ಬಿಡಾಡಿ ದನಗಳು ರಸ್ತೆಯ ಮಧ್ಯದಲ್ಲಿಯೇ ಮಲಗಿಕೊಂಡಿರುತ್ತವೆ. ಇದರಿಂದಾಗಿ ವಾಹನ ಸವಾರರು ಪರದಾಡುತ್ತಾರೆ. ರಸ್ತೆಯಲ್ಲಿ ಬರುವ ಬಿಡಾಡಿ ದನಗಳಿಗೆ ತಪ್ಪಿಸಲು ಹೋಗಿ, ಬೈಕ್ ಸವಾರರು ಕೆಳಗೆ ಬಿದ್ದ ಗಾಯಗೊಂಡಿರುವ ಘಟನೆಗಳು ನಡೆದಿವೆ. ಬಿಡಾಡಿ ದನಗಳ ಹಾವಳಿ ಮಾತ್ರ ಮಹಾನಗರ ಪಾಲಿಕೆಗೆ ಗೊತ್ತಾಗುತ್ತಿಲ್ಲವೆಂದು ಬಳ್ಳಾರಿ ನಾಗರಿಕರು ರೋಸಿಹೋಗಿದ್ದಾರೆ.
ವಾರಸುದಾರರಿಗೆ ಕಾಳಜಿಯೂ ಇಲ್ಲ
ಬಳ್ಳಾರಿ ಮಹಾನಗರದಲ್ಲಿ ಜಾನುವಾರು ಸಾಕಾಣಿಕೆ ಸುಲಭ ಉಪಾಯವಾಗುತ್ತದೆ. ಎಲ್ಲ ಜಾನುವಾರು ಸಾಕಾಣಿಕೆದಾರರು ಈ ರೀತಿಯಾಗಿರುವುದಿಲ್ಲ. ಆದರೆ ಕೆಲವೊಬ್ಬರು ತಮ್ಮ ಜಾನುವಾರುಗಳಿಗೆ ಮೇವು ಒದಗಿಸುವ ತಾಪತ್ರಯದಿಂದ ಮುಕ್ತಿ ಹೊಂದಿರುತ್ತಾರೆ. ಹಾಲು ಕರೆಯುವಾಗ ಮನೆಯಲ್ಲಿ ಸಾಕುತ್ತಾರೆ. ಹಾಲು ಕರೆಯುವ ದಿನಗಳು ಮುಗಿದ ಮೇಲೆ ನಗರದಲ್ಲಿ ಓಡಾಡುವುದಕ್ಕೆ ಬಿಡುತ್ತಾರೆ. ಆ ಜಾನುವಾರು ಕರು ಹಾಕಿದಾಗ ಮಾತ್ರ ನೆನಪಾಗುತ್ತದೆ. ಅಲ್ಲಿಯವರೆಗೆ ಅದು ಬಿಡಾಡಿ ದನವಾಗಿಯೇ ನಗರದ ತುಂಬೆಲ್ಲ ಸಂಚರಿಸುತ್ತಾ, ಅಲ್ಲಲ್ಲಿ ಬಿದ್ದಿರುವುದನ್ನು ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಮಾರಾಟಕ್ಕಿರುವ ತರಕಾರಿಗಳನ್ನು ತಿಂದು ಜೀವನ ಸಾಗಿಸುತ್ತದೆ.
ಬಿಡಾಡಿ ದನಗಳಿಗೆ ಕಡಿವಾಣ ಎಂದು?
ಇಂಥ ದನಗಳಿಗೆ ಕಡಿವಾಣ ಹಾಕುವ ಬಗ್ಗೆ ಪಾಲಿಕೆ ನಿರ್ದಿಷ್ಟ ಕ್ರಮ ಕೈಗೊಳ್ಳಬೇಕು, ಇದರಿಂದಾಗಿ ಬಿಡಾಡಿ ದನಗಳ ಮಾಲೀಕರಿಗೆ ಬುದ್ಧಿ ಕಲಿಸಲು ಸಾಧ್ಯವಾಗುತ್ತದೆ. ಪಾಲಿಕೆ ಬಿಡಾಡಿ ದನಗಳ ಬಗ್ಗೆ ನಿರ್ಲಕ್ಷ್ಯವಹಿಸಿದರೆ ಮುಂದಿನ ದಿನಗಳಲ್ಲಿ ಇವುಗಳ ಹಾವಳಿ ಹೆಚ್ಚಾಗುವ ಸಾಧ್ಯತೆ ಇದೆ.
- ಶಶಿಧರ ಮೇಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com