ಹಗರಿಬೊಮ್ಮನಹಳ್ಳಿ: ನಿಗದಿಗಿಂತ ನೂರು, ನೂರೈವತ್ತು ರುಪಾಯಿ ಹೆಚ್ಚು ದರಕ್ಕೆ ಡಿಎಪಿ, ಯೂರಿಯಾ ರಸಗೊಬ್ಬರವನ್ನು ಪಟ್ಟಣದಲ್ಲಿ ಮಾರಾಟ ಮಾಡಲಾಗುತ್ತಿದೆ. ಬಿಳಿ ಹಾಳೆಯ ಮೇಲೆ ಬರೆದುಕೊಡುತ್ತಿದ್ದಾರೆ ಎಂದು ಶನಿವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ತಾಪಂ ಸಾಮಾನ್ಯಸಭೆಯಲ್ಲಿ ಅಂಬಳಿ ಕ್ಷೇತ್ರದ ಸದಸ್ಯ ಚಂದ್ರಪ್ಪ ಆರೋಪಿಸಿದರು.
ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪೂರ್ಯನಾಯ್ಕ ಅಧ್ಯಕ್ಷತೆಯಲ್ಲಿ ಆರಂಭವಾದ ಸಭೆಯಲ್ಲಿ ಹಿಂದಿನ ಸಭೆಯ ನಿರ್ಣಯಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಚಂದ್ರಪ್ಪ, ರೈತರಿಗೆ ಅಗತ್ಯವಿಲ್ಲದ ಬೀಜಗಳನ್ನು ಲಿಂಕ್ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದ್ದರೂ ಇಲ್ಲಿನ ಕೃಷಿ ಇಲಾಖೆ ಮಾತ್ರ ಕಣ್ಣುಮುಚ್ಚಿಕೊಂಡು ಕುಳಿತಿದೆ ಎಂದು ಇಲಾಖೆಯ ವಿರುದ್ಧ ಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು.
ಪಟ್ಟಣದ ಯಾವ ಅಂಗಡಿಯಲ್ಲಿ ಈ ರೀತಿ ಆಗುತ್ತಿದೆ ಎಂದು ನೀವು ದೂರು ಬರೆದು ಕೊಡಿ, ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪ್ರಭಾರಿ ಎಡಿಎ ನಾಗರಾಜ ಸಭೆಗೆ ಉತ್ತರಿಸಿದರು. ಜನರಿಂದ ನೇರವಾಗಿ ಆಯ್ಕೆಯಾಗಿರುವ ನಾನು ಸಭೆಯಲ್ಲಿ ಬಹಿರಂಗವಾಗಿ ಆರೋಪ ಮಾಡಿದ ಮೇಲೂ ಲಿಖಿತ ದೂರು ಬರೆದುಕೊಡಿ ಎನ್ನುತ್ತಿರಲ್ಲ, ನೀವು ಇರುವುದು ಯಾಕೆ? ಎಂದು ಖಾರವಾಗಿ ಪ್ರಶ್ನಿಸಿ, ಈ ಎಲ್ಲ ಅವ್ಯವಹಾರಕ್ಕೆ ನಿಮ್ಮದು ಕುಮ್ಮಕ್ಕು ಇದೆ ಎಂದು ಅಧಿಕಾರಿ ವಿರುದ್ಧ ಹರಿಹಾಯ್ದರು. ಮಧ್ಯೆ ಪ್ರವೇಶಿಸಿದ ತಾಪಂ ಇಓ ಬಿಎಂಎಸ್
ವೀರಯ್ಯ, ಸಭೆಯಲ್ಲಿ ಮಾತನಾಡುವಾಗ ಎಚ್ಚರವಿರಲಿ, ಸದಸ್ಯರು ಕೇಳಿದ ಪ್ರಶ್ನೆಗೆ ಸಮರ್ಪಕವಾಗಿ ಉತ್ತರಿಸುವುದನ್ನು ಕಲಿತುಕೊಳ್ಳಿ, ಹೆಚ್ಚಿನ ಬೆಲೆಗೆ ಗೊಬ್ಬರ ಹಾಗೂ ಅನಗತ್ಯ ಬಿತ್ತನೆ ಬೀಜಗಳ ಲಿಂಕ್ ಮಾಡುತ್ತಿರುವ ಮಾರಾಟಗಾರರ ಮೇಲೆ ಕ್ರಮ ಜರುಗಿಸಿ ಎಂದು ಆದೇಶಿಸಿದರು.
ಹಗಲು ಹೊತ್ತಲ್ಲಿ ಉರಿವ ದೀಪಗಳು
ತಾಲೂಕಿನಾದ್ಯಂತ ಹಗಲು ವೇಳೆಯಲ್ಲಿಯೇ ಬೀದಿ ದೀಪಗಳು ಉರಿಯುತ್ತಿರುತ್ತವೆ. ಇದರಿಂದ ಸಾಕಷ್ಟು ವಿದ್ಯುತ್ ವ್ಯರ್ಥವಾಗುತ್ತಿದೆ. ಕೂಡಲೆ ಇದನ್ನು ಸರಿಪಡಿಸಿ ವಿದ್ಯುತ್ ಉಳಿಸಿ ಎಂದು ಸದಸ್ಯ ಕೆ.ಉಮೇಶ ಸಭೆಯಲ್ಲಿ ಆಗ್ರಹಿಸಿದರು. ಗ್ರಾಮಗಳಲ್ಲಿನ ಒಂದೊಂದು ಕಂಬಕ್ಕೂ ಬೇರೆ, ಬೇರೆ ಲೈನ್ಗಳಿಂದ ಸಂಪರ್ಕ ನೀಡಲಾಗಿದೆ. ಇದರಿಂದ ಏಕಕಾಲಕ್ಕೆ ಎಲ್ಲ ಲೈಟ್ಗಳನ್ನು ಆಫ್ ಮಾಡಲು ಸಾಧ್ಯವಾಗ್ತಿಲ್ಲ. ಎಲ್ಲ ಬೀದಿ ಕಂಬಳಿಗೆ ಒಂದೇ ಲೈನ್ ಸಂಪರ್ಕ ಕಲ್ಪಿಸಲು ಪಂಚಾಯ್ತಿಯವರು ಪ್ರಸ್ತಾವನೆಯನ್ನು ತಯಾರಿಸಿ ಇಲಾಖೆಗೆ ಸಲ್ಲಿಸಿದರೆ ನಾವು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಜೆಸ್ಕಾಂ ಎಇಇ ಮೋಟ್ಲನಾಯ್ಕ ತಿಳಿಸಿದರು.
ಮಾತಿನ ಚಕಮಕಿ
ಕುಡಿವ ನೀರಿನ ಸಮಸ್ಯೆ ವಿಚಾರವಾಗಿ ಚಿಂತ್ರಪಳ್ಳಿ ಗ್ರಾಪಂ ಪಿಡಿಓ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ, ದೂರವಾಣಿಯಲ್ಲಿ ಸಂಪರ್ಕಿಸಿದರೆ ನಮ್ಮ ಕರೆಯನ್ನು ಸ್ವೀಕರಿಸುತ್ತಿಲ್ಲ. ಮಹಿಳಾ ಸದಸ್ಯರ ದೂರವಾಣಿ ಕರೆಯನ್ನು ಸ್ವೀಕರಿಸಲಾರದಷ್ಟು ಇವರು ಬಿಜಿಯಾಗಿದ್ದಾರೆಯೇ ಎಂದು ಸದಸ್ಯೆ ಪವಾಡಿ ಗಂಗಮ್ಮ ಹನುಮಂತಪ್ಪ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ಈ ವಿಚಾರವಾಗಿ ಸಭೆಯಲ್ಲಿ ಪಿಡಿಓ ಮತ್ತು ಗಂಗಮ್ಮ ಮಧ್ಯೆ ಬಿರುಸಿನ ಮಾತಿನ ಚಕಮಕಿ ನಡೆಯಿತು. ಕೊನೆಗೆ ಇಓ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಹಬದಿಗೆ ತಂದರು.
ಶಿಕ್ಷಣ, ಸಮಾಜ ಕಲ್ಯಾಣ, ಆರೋಗ್ಯ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ವಿಚಾರಗಳ ಮೇಲೆ ಚರ್ಚೆ ನಡೆಯಿತು. ಉಪಾಧ್ಯಕ್ಷೆ ನಾಗರತ್ನಮ್ಮ ವೆಂಕಟೇಶ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ.ಎಸ್. ಪ್ರಕಾಶ ಸಭೆಯಲ್ಲಿ ಇದ್ದರು.