ಬೀದರ್: ಫೆ.23 ರಿಂದ ಮೂರು ದಿನಗಳ ವರೆಗೆ ಇಲ್ಲಿನ ಬಸವಗಿರಿ ಪರಿಸರದಲ್ಲಿ ನಡೆಯಲಿರುವ ವಚನ ವಿಜಯೋತ್ಸವ ಕಾರ್ಯಕ್ರಮದ ಪ್ರಚಾರಾರ್ಥ ಜಿಲ್ಲಾದ್ಯಂತ ಸಂಚರಿಸಲಿರುವ ಬಸವಜ್ಯೋತಿ ರಥಯಾತ್ರೆಗೆ ಶನಿವಾರ ಚಾಲನೆ ನೀಡಲಾಗಿಯಿತು.
ನಗರದ ಶರಣ ಉದ್ಯಾನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಐದು ಪ್ರಚಾರದ ರಥ(ವಾಹನ)ಗಳಿಗೆ ಉತ್ಸವದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಗುರುನಾಥ ಕೊಳ್ಳೂರ್ ಹಾಗೂ ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಬಾಬು ವಾಲಿ ಷಟಸ್ಥಲ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು.
ಅಕ್ಕ ಅನ್ನಪೂರ್ಣ ಸಾನ್ನಿಧ್ಯ ವಹಿಸಿ ಮಾತನಾಡಿ, 5 ರಥಗಳು 20 ದಿನಗಳ ವರೆಗೆ ಜಿಲ್ಲೆಯ ಸುಮಾರು 500 ಗ್ರಾಮಗಳಿಗೆ ಭೇಟಿ ನೀಡಲಿವೆ. ವಚನ ವಿಜಯೋತ್ಸವ ಅದ್ಧೂರಿ ಜೊತೆಗೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ಈ ರಥಗಳು ಮಾಡಲಿವೆ ಎಂದರು.
ಬಸವ ರಥ(ಬೀದರ್), ಚನ್ನಬಸವ ರಥ(ಔರಾದ್),ಮಡಿವಾಳ ಮಾಚಿದೇವ ರಥ(ಭಾಲ್ಕಿ), ನಾಗಲಾಂಬಿಕೆ ರಥ(ಹುಮನಾಬಾದ್) ಮತ್ತು ಹರಳಯ್ಯ ರಥ (ಬಸವಕಲ್ಯಾಣ)ಗಳು ಆಯಾ ತಾಲೂಕುಗಳಲ್ಲಿ ಸಂಚರಿಸಲಿವೆ. ಬಸವಜ್ಯೋತಿ ಹೊತ್ತು ರಥಗಳು ಗ್ರಾಮಕ್ಕೆ ಬಂದಾಗ ಭಕ್ತರು ಭಕ್ತಿಯಿಂದ ಬರಮಾಡಿಕೊಳ್ಳಬೇಕೆಂದು ಕೋರಿದರು.
ಕಲ್ಯಾಣ ರಾಜ್ಯದ ಮರು ನಿರ್ಮಾಣವೇ ವಚನ ವಿಜಯೋತ್ಸವದ ಧ್ಯೇಯ. ಸಾರ್ವಕಾಲಿಕ ಶ್ರೇಷ್ಠ ಹಾಗೂ ಸತ್ಯವಾಗಿರುವ ವಚನ ಇಡೀ ಮನುಕುಲಕ್ಕೆ ಮಾರ್ಗದರ್ಶಿ.
ವಚನ ವಿಜಯೋತ್ಸವದ ಮೂಲಕ ಹಳೆ ವೈಭವವನ್ನು ಮತ್ತೆ ಮರುಕಳಿಸುವ ಪ್ರಯತ್ನ ನಡೆದಿದೆ ಎಂದ ಅವರು, ಡಾ.ಗಂಗಾಂಬಿಕೆ, ಚನ್ನಬಸಬ ಶರಣರು ಹಾಗೂ ಬಸವರಾಜ ರುದ್ರವಾಡಿ ನೇತೃತ್ವದಲ್ಲಿ ರಥಗಳು ಸಂಚರಿಸಲಿವೆ ಎಂದರು.
ಉಚಿತ ಕೃತಕ ಕಾಲು ಜೋಡಣೆ ಶಿಬಿರ: ಕಾರ್ಯಕ್ರಮದ ನಿಮಿತ್ತ ಫೆ.21ರಿಂದ 25ರ ವರೆಗೆ ನಗರದ ಶರಣ ಉದ್ಯಾನದಲ್ಲಿ ಉಚಿತ ಕೃತಕ ಕಾಲು ಜೋಡಣೆ ಶಿಬಿರ ಆಯೋಜಿಸಲಾಗಿದೆ. ಅಂಗವಿಕಲರಿಗೆ ಇದೊಂದು ದೊಡ್ಡ ಅವಕಾಶ ಕಲ್ಪಿಸಲಾಗಿದ್ದು, ಬೆಂಗಳೂರಿನ ಪರಿಣತ ವೈದ್ಯರ ತಂಡ ಕಾಲು ಜೋಡಣೆ ನಡೆಸಲಿದೆ. ಜಿಲ್ಲೆಯ ಕಾಲಿಲ್ಲದವರು ಫೆ.15ರೊಳಗೆ ಶರಣ ಉದ್ಯಾನದಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕೆಂದು ಕೋರಿದರು.
ಕಾಶಪ್ಪ ಧನ್ನೂರ ಹಾಗೂ ಚಂದ್ರಕಾಂತ ವಸ್ಮತೆ ಗುರುಪೂಜೆ ನೆರವೇರಿಸಿದರು. ಪ್ರಮುಖರಾದ ಶಂಕರೆಪ್ಪ ಹೊನ್ನಾ, ರಂಜಾನ ದರ್ಗಾ, ಜಯರಾಜ ಖಂಡ್ರೆ, ಬಸವರಾಜ
ಧನ್ನೂರ, ವಿಶ್ವನಾಥ ಕಾಜಿ, ರಾಚಪ್ಪ ಪಾಟೀಲ್, ಮಲ್ಲಿಕಾರ್ಜುನ ಮೊಳಕೇರಿ, ರಾಜಕುಮಾರ ಪಾಟೀಲ್, ಅಶೋಕ ಎಲಿ, ಶಕುಂತಲಾ ಬೆಲ್ದಾಳೆ, ನೀಲಮ್ಮ ರೂಗನ್, ನೀಲಾಂಬಿಕೆ ಮಠಪತಿ, ಜಯಶ್ರೀ ಸುಕಾಲೆ, ಪ್ರೇಮಲತಾ ಕುಲಾಲ್, ಶಿವರಾಜ ಮದಕಟ್ಟಿ, ರಮೇಶ ಮಠಪತಿ ಮತ್ತಿತರರು ಇದ್ದರು.