ಭಾಲ್ಕಿ: ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯದ ಬಿಜೆಪಿ ಸರ್ಕಾರ ಸುಮಾರು ಅಭಿವೃದ್ಧಿಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಪ್ರಕಾಶ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಹಲಬರ್ಗಾ ಗ್ರಾಮದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಗ್ರಾಮ ಸಮಿತಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರೈತಪರ, ಕಾರ್ಮಿಕ ಪರ, ಸರ್ಕಾರಿ ಸಿಬ್ಬಂದಿ ಪರವಾಗಿ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಸಾಬೀತು ಪಡಿಸಿದೆ ಎಂದರು.
ಯೋಜನೆಗಳು: ಇಗಾಗಲೇ ಅನುಷ್ಠಾನದಲ್ಲಿರುವ ವೃದ್ಧಾಪ್ಯ ವೇತನ, ಗಂಗಾ ಕಲ್ಯಾಣ ಯೋಜನೆ, ಅಂಗವಿಕಲರಿಗೆ ವೇತನ, ವಿಧವಾ ವೇತನ ಹೀಗೆ ಹಲವು ಯೋಜನೆಗಳನ್ನು ಜಾರಿಗೆ ತರುವುದಲ್ಲದೆ ಇನ್ನು ಹೆಚ್ಚಿನ ಯೋಜನೆಗಳು ಮುಂಬರುವ ಬಜೆಟ್ ಮಂಡನೆಯಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸೂಚಿಸಲಿದ್ದಾರೆಂದು ತಿಳಿಸಿದರು.
ಗ್ರಾಮ ಮಟ್ಟದಲ್ಲಿ ಬಿಜೆಪಿ ಪಕ್ಷ ಬಲಿಷ್ಠಗೊಳಿಸಬೇಕಾದರೆ ನಾವು ಮಾಡಿದ ಎಲ್ಲಾ ಸಾಧನೆಗಳನ್ನು ಮನೆ ಮನೆಗೆ ತೆರಳಿ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿಪರ ಕಾರ್ಯಗಳ ಬಗ್ಗೆ ವಿಶ್ಲೇಷಣೆ ಮಾಡುವುದು ಕಾರ್ಯಕರ್ತರ ಆದ್ಯ ಕರ್ತವ್ಯ ಎಂದು ತಿಳಿ ಹೇಳಿದರು.
ನನ್ನ ಅಧಿಕಾರಾವಧಿಯಲ್ಲಿಯೇ ಅನೇಕ ಅಭಿವೃದ್ಧಿಪರ ಕಾಮಗಾರಿಗಳನ್ನು ಮಾಡಿಸಿದ್ದಾಗಿಯು ತಿಳಿಸುತ್ತಾ, ಇನ್ನು ಮುಂದೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಇರುವವರೆಗೆ ನನ್ನ ಕೈಯಿಂದ ಆದಷ್ಟು ಸಾರ್ವಜನಿಕರ ಸೇವೆ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ತಕ್ಕ ಪಾಠ: ಹಾಲಿ ಶಾಸಕ ಈಶ್ವರ ಖಂಡ್ರೆ ಅವರಿಗೆ ಅಭಿವೃದ್ಧಿ ಕಾರ್ಯ ಮಾಡಲು ಅವಕಾಶ ಸಿಕ್ಕರೂ ಅದರ ಸದುಪಯೋಗ ಪಡೆದುಕೊಳ್ಳದೆ, ಕೇವಲ ಸರ್ಕಾರದ ವಿರುದ್ಧ ದೂರು ಸಲ್ಲಿಸುವುದರಲ್ಲಿಯೇ ಕಾಲಹರಣ ಮಾಡುತ್ತಿರುವುದು ಜನರಿಗೆ ಗೊತ್ತಾಗುತ್ತಿದೆ. ಮುಂಬರುವ ಚುನಾವಣೆಯಲ್ಲಿ ಸಾರ್ವಜನಿಕರು ತಕ್ಕ ಪಾಠ ಕಲಿಸಲಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಗಂದಗೆ, ಹಲಬರ್ಗಾ ಶಕ್ತಿ ಕೇಂದ್ರದ ಅಧ್ಯಕ್ಷ ಸೂರ್ಯಕಾಂತ ಜಮಶೆಟ್ಟಿ, ಜಿಪಂ ಸದಸ್ಯ ವೆಂಕಟ ಬಿರಾದಾರ, ಅನೀಲ ಹೊಳಸಮುದ್ರಕರ್, ಬಿಜೆಪಿ ತಾಲೂಕು ಅಧ್ಯಕ್ಷ ರಾವುಸಾಬ್ ಬಿರಾದಾರ, ಶಿವರಾಜ ಕುದ್ರೆ, ಪುರಸಭೆ ಸದಸ್ಯ ದತ್ತು ತುಗಾಂವ್ಕರ, ಪ್ರಕಾಶ ಮಾಶೆಟ್ಟೆ, ಉಮಾಕಾಂತ ಪ್ರಭಾ, ಶ್ರೀಕಾಂತ ದಾನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.