ಬೀದರ್: ಯಾವುದೇ ಧರ್ಮದ ಪೂಜೆ, ಆರಾಧನೆಯನ್ನು ತಮ್ಮ ತಮ್ಮ ಮನೆಯಂಗಳದೊಳಗೆ ಮಾಡಿದರೆ ಸಮಾಜದಲ್ಲಿ ಶಾಂತಿ ನೆಲೆಸಿ, ನೆಮ್ಮದಿ ಬದುಕು ನಡೆಸಲು ಸಾಧ್ಯ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ರಾಷ್ಟ್ರೀಯ ಕಾರ್ಯದರ್ಶಿ ವಿನಯ ಬಿದರೆ ಅಭಿಪ್ರಾಯಪಟ್ಟರು.
ನಗರದಲ್ಲಿ ಎಬಿವಿಪಿಯಿಂದ ಸ್ವಾಮಿ ವಿವೇಕಾನಂದರ 150ನೇ ಹಾಗೂ ಸುಭಾಶ್ಚಂದ್ರ ಬೋಸ್ ಅವರ 116ನೇ ಜಯಂತಿ ಆಚರಣೆಯಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದರು ಷಿಕಾಗೋ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಯಾವುದೇ ಧರ್ಮ ಕುರಿತು ಮಾತನಾಡಿಲ್ಲ. ಇಂದು ರಾಮ, ಏಸು, ಅಲ್ಲಾಹನ ಪೂಜೆ ಮಾಡಲಿ. ಆದರೆ ಅದೆಲ್ಲ ತಮ್ಮ ತಮ್ಮ ಮನೆ ಬಾಗಿಲಿನ ಒಳಗೆ ಇರಬೇಕು. ಪ್ರತಿಯೊಬ್ಬರು ತಮ್ಮ ಮನೆಯ ಹೊರಗೆ ಬಂದಾಗ ಇದು ನನ್ನ ದೇಶ, ನನ್ನ ಸಮಾಜ, ನನ್ನವರು ಎಂಬ ಭಾವನೆ ಮನದಲ್ಲಿ ಮೂಡಿದರೆ ದೇಶ ಭಕ್ತಿ ಹೆಚ್ಚುತ್ತದೆ ಎಂದಿದ್ದರು ಎಂದು ಸ್ಮರಿಸಿದರು.
ಮಹಿಳೆಯರ ಬಗ್ಗೆ ಗೌರವವಿರಲಿ: ಮಹಿಳೆಯರಿಗೆ ಸ್ಥಾನಮಾನ, ಗೌರವ ಕೊಟ್ಟ ದೇಶ ಭಾರತವಾಗಿದ್ದು ವಿವೇಕಾನಂದರು ಮಹಿಳೆಯರು ಈ ದೇಶದ ಆಸ್ತಿ ಎಂದು ಕರೆದಿದ್ದರು. ಹೀಗಾಗಿ ನಮ್ಮಲ್ಲಿ ಮಹಿಳೆಯರ ಬಗ್ಗೆ ಅಪಾರ ಕಾಳಜಿ ಮತ್ತು ಗೌರವ ಇರಲಿ ಎಂದು ಬಿದರೆ ನುಡಿದರು.
ವಿವೇಕಾನಂದರಿಂದ ಬೋಸ್ ಪ್ರೇರಣೆ: ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಕಾಲೇಜು ಪ್ರಾಚಾರ್ಯ ಗೋವಿಂದರಾಜ್ ಮಾತನಾಡಿ, ಬ್ರಿಟಿಷರನ್ನು ದೇಶದಿಂದ ಹೊರ ಹಾಕಿದ ಸುಭಾಶ್ಚಂದ್ರ ಬೋಸ್ ಅವರು ಸ್ವಾಮಿ ವಿವೇಕಾನಂದರಿಂದ ಪ್ರೇರಣೆ ಪಡೆದಿದ್ದರು ಎಂದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಗಮೇಶ, ಎಂ.ಪ್ರಾಣೇಶ, ಪ್ರದೀಪ, ಓಂಕಾರ, ಅಲೋಕ, ಅರವಿಂದ, ಪುಷ್ಪಕ, ಅಶೋಕ ಅಂಬಾದಾಸ, ನರಸಿಂಗ್, ಶಿವನಾಥ, ಧನರಾಜ, ಹಾಗೂ ಮಹಾಲಕ್ಷ್ಮೀ ಇದ್ದರು. ಪಿಎಸ್ಐ ಮಲ್ಲಮ್ಮ ಚೌಬೆ ಕಾರ್ಯಕ್ರಮ ಉದ್ಘಾಟಿಸಿದರು. ರಮೇಶ ಪಾಟೀಲ್ ಸ್ವಾಗತಿಸಿ ಲಕ್ಷ್ಮಣ ಗೊಗಡೆ ನಿರೂಪಿಸಿದರು. ಫೆ.1ರಂದು ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.