ಬೀದರ್: ಪುರುಷರಿಗೆ ಹೋಲಿಸಿದಾಗ ಮಹಿಳೆಯರ ಲಿಂಗಾನುಪಾತದ ಬೀದರ್ ಜಿಲ್ಲೆ ಸಾವಿರ ಪುರುಷರಿಗೆ 952.14 ಮಹಿಳೆಯರು ಮಾತ್ರ ಹೊಂದಿದ್ದಾರೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ. ವಾಮನರಾವ ವಾಘಮಾರೆ ತಿಳಿಸಿದರು.
ತಾಲೂಕಿನ ಮನ್ನಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಮುನ್ನ ಭ್ರೂಣ ಲಿಂಗ ಪತ್ತೆ ಶಾಸನ ಕುರಿತು ಆರೋಗ್ಯ ಸೇವಾ ವೃತ್ತಿಪರರಿಗೆ ಏರ್ಪಡಿಸಲಾದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಭ್ರೂಣ ಲಿಂಗ ಪತ್ತೆ ಅಪರಾಧವಾಗಿದ್ದು ಇದನ್ನು ಯಾರು ಉಲ್ಲಂಘನೆ ಮಾಡಬಾರದು ಎಂದರು.
ನ್ಯಾಯವಾದಿ ಗೋರಕನಾಥ ಮಾತನಾಡಿ, ಭ್ರೂಣಲಿಂಗ ಪತ್ತೆ ಮಾಡುವುದು ಅಪರಾಧವಾಗಿದ್ದು 1994ರಲ್ಲಿ ಈ ಕಾಯ್ದೆ ಜಾರಿಗೆ ಬಂದಿದ್ದು, ಇದರಡಿಯಲ್ಲಿ ಯಾವುದೇ ವ್ಯಕ್ತಿ ತಪ್ಪು ಮಾಡಿದಲ್ಲಿ 3 ವರ್ಷ ಜೈಲು ಶಿಕ್ಷೆ ಅಥವಾ 50 ಸಾವಿರ ದಂಡ ವಿಧಿಸಲಾಗುವುದು. ಎರಡನೇ ಸಲ ತಪ್ಪು ಮಾಡಿದಲ್ಲಿ ಅಂತಹವರಿಗೆ 5 ವರ್ಷ ಜೈಲು ಶಿಕ್ಷೆ ಅಥವಾ 1 ಲಕ್ಷ ದಂಡ ವಿಧಿಸಲಾಗುವುದು ಎಂದು ತಿಳಿಸಿದರು. ಯಾವುದೇ ಪ್ರಕರಣ ಕಂಡುಬಂದಲ್ಲಿ ದೂರು ನೀಡಿದವರಿಗೆ 1 ಸಾವಿರ ಪುರಸ್ಕಾರ ನೀಡಲಾಗುವುದು ಹಾಗೂ ಕಾನೂನಿನ ಪ್ರಕಾರ ಸಾಬೀತಾದಲ್ಲಿ ದೂರುದಾರರಿಗೆ 10 ಸಾವಿರ ಬಹುಮಾನ ನೀಡಲಾಗುವುದು ಎಂದರು.
ಉಪ-ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಸುಭಾಷ ಮುಧಾಳೆ ಮಾತನಾಡಿ, ದೇಶದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ಹಾಗೂ ವಿದ್ಯಾಭ್ಯಾಸದಲ್ಲಿ ಪ್ರೋತ್ಸಾಹ ಹಾಗೂ 18 ವಯಸ್ಸಿನ ನಂತರ ಬಾಲಕಿಯರಿಗೆ ವಿವಾಹ ಮಾಡಿದಾಗ ಮಹಿಳೆಯರ ಮರಣದ ಸಂಖ್ಯೆ ಕಡಿಮೆಯಾಗುವುದಿಲ್ಲ. ಇದರಿಂದ ಲಿಂಗಾನುಪಾತದಲ್ಲಿ ಹೆಚ್ಚು ಏರುಪೇರು ಆಗುವುದಿಲ್ಲ ಎಂದು ತಿಳಿಸಿದರು. ದೇಶದಲ್ಲಿ ಪುರುಷ, ಮಹಿಳೆಯರ ಅನುಪಾತದಲ್ಲಿ ಗಣನೀಯ ಇಳಿಮುಖವಾಗಿರುತ್ತದೆ.
ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಬಿರೇಂದ್ರ ದೋಣಿ ಮಾತನಾಡಿ, ಇದೊಂದು ಆತಂಕಕಾರಿ ಬೆಳವಣಿಗೆಯಾಗಿದ್ದು ಇದರಿಂದ ಸಾಮಾಜಿಕ, ರಾಜಕೀಯ, ಆರ್ಥಿಕ ಸನ್ನಿವೇಶಗಳ ಸೃಷ್ಟಿಗೆ ಅನುವುಮಾಡಿಕೊಡುತ್ತದೆ. ಇಂತಹ ಪ್ರವೃತ್ತಿಯನ್ನು ಶೀಘ್ರವಾಗಿ ತಡೆಯಲು ವೈದ್ಯರು, ತಂತ್ರಜ್ಞರು ಹಾಗೂ ಸಾರ್ವಜನಿಕರು ಪೂರ್ಣ ಪ್ರಮಾಣದಲ್ಲಿ ಸರ್ಕಾರಕ್ಕೆ ಸಹಕಾರ ನೀಡಬೇಕಾಗಿದೆ ಎಂದು ತಿಳಿಸಿದರು.
ಮನ್ನಳ್ಳಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂಗರೆಡ್ಡಿ ಮಾತನಾಡಿ ಪುರುಷ, ಮಹಿಳೆಯರ ಲಿಂಗಾನುಪಾತದಲ್ಲಿ ವ್ಯತ್ಯಾಸವಾಗುವುದರಿಂದ ಮಹಿಳೆಯರ ಮೇಲೆ ಅತ್ಯಾಚಾರ ಹೆಚ್ಚಾಗುವುದು, ಲೈಂಗಿಕ ಸಂಪರ್ಕದಿಂದ ಬರುವ ರೋಗಗಳು ಹೆಚ್ಚಾಗುವುದರಿಂದ ಕುಟುಂಬದ ವ್ಯವಸ್ಥೆ ಹಾಳಾಗಿ ದೇಶದಲ್ಲಿ ಅಶಾಂತಿ ಹೆಚ್ಚಾಗುವುದಲ್ಲದೇ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ವಿವರಿಸಿದರು.
ಚಿಲ್ಲರ್ಗಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಭೀಮಣ್ಣ ಬಾವಿಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕಿಯರು, ಗ್ರಾಮದ ಮುಖಂಡರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.