ಬೀದರ್: ರಾಜ್ಯದಲ್ಲಿ 4 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ಸರ್ಕಾರ ಅರ್ಜಿ ಆಹ್ವಾನಿಸಿದ್ದು ಆನ್ಲೈನ್ ಅರ್ಜಿ ತುಂಬುವ ಬಗೆ ಹೇಗೆ ಎನ್ನುವ ವಿಷಯವಾಗಿ ಇಲ್ಲಿನ ಶಾಹೀನ್ ಶಿಕ್ಷಣ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ರಂಗಮಂದಿರದಲ್ಲಿ ಫೆ.10 ರಂದು ಬೆ.11ಕ್ಕೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ತಜ್ಞರಾದ ಮಹಮ್ಮದ್ ಗುಲ್ಸಿನ್ ಹಾಗೂ ಸೈಯದ್ ಫುರಖಾನ್ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಕಾರ್ಯಾಗಾರದಲ್ಲಿ ಆನ್ಲೈನ್ ಅರ್ಜಿಯಲ್ಲಿರುವ ಅಂಶಗಳು, ತುಂಬುವ ಬಗೆ, ವಿದ್ಯಾರ್ಹತೆ, ಪರೀಕ್ಷಾ ಪಠ್ಯಕ್ರಮದ ಬಗ್ಗೆ ಮಾಹಿತಿ. ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಗುಣಮಟ್ಟ ವೃದ್ಧಿಸುವ ಅಗತ್ಯವಿದೆ. ಸ್ಥಳೀಯ ಅಭ್ಯರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲಾಗಿದ್ದು, ಅವರ ನೇಮಕಕ್ಕೆ ನೆರವಾಗಲು ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅಬ್ದುಲ್ ಖದೀರ್ ತಿಳಿಸಿದ್ದಾರೆ. ಅಭ್ಯರ್ಥಿಗಳು ಕಾರ್ಯಾಗಾರದ ಲಾಭ ಪಡೆಯಬೇಕೆಂದು ಮನವಿ ಮಾಡಿದ್ದಾರೆ.
6 ಗಂಟೆ ನಿರಂತರ ವಿದ್ಯುತ್ಗೆ ಆಗ್ರಹ
ಬೀದರ್: ಜಿಲ್ಲೆಯ ರೈತರ ನೀರಾವರಿ ಪಂಪಸೆಟ್ಗಳಿಗೆ ಹಗಲಿನಲ್ಲಿ ನಿರಂತರ 6 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕೆಂದು ರಾಜ್ಯ ರೈತ ಸಂಘ ಆಗ್ರಹಿಸಿದೆ. ಈ ಕುರಿತು ರೈತ ಸಂಘದ ಕಾರ್ಯದರ್ಶಿ ಪ್ರಭುರಾವ ಪಾಟೀಲ್ ಹೊನ್ನಡಿ ಅವರು ಈಚೆಗೆ ಗುಲ್ಬರ್ಗ ವಿಭಾಗದ ಮುಖ್ಯ ಎಂಜಿನಿಯರ್ರೊಂದಿಗೆ ಚರ್ಚೆ ನಡೆಸಿ ರೈತ ಸಂಘದಿಂದ ಪಂಪಸೆಟ್ಗಳಿಗೆ ಹಗಲಿನಲ್ಲಿ 6 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು. ಹಲವಾರು ವರ್ಷಗಳಿಂದ ರೈತರು ನೀರಾವರಿ ಪಂಪಸೆಟ್ಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ 16ರಿಂದ 20 ಸಾವಿರ ಇಲಾಖೆಗೆ ಪಾವತಿಸಿ ಸಂಪರ್ಕಕ್ಕಾಗಿ ಬೇಕಾದ ಕಂಬ, ತಂತಿ ಮತ್ತಿತರರು ಅಳವಡಿಸುವುದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ರೈತರಿಗೆ ವಿದ್ಯುತ್ ಸಂಪರ್ಕ ನೀಡಲು ವಿಳಂಬ ಮಾಡದೇ ಕೂಡಲೇ ವಿದ್ಯುತ್ ಸಂಪರ್ಕ ಒದಗಿಸಬೇಕೆಂದು ಆಗ್ರಹಿಸಲಾಯಿತು ಎಂದು ತಿಳಿಸಿದರು.
ಆಯ್ಕೆಯಲ್ಲಿ ಅವ್ಯವಹಾರ
ಬೀದರ್: ತಾಲೂಕಿನ ಅಲಿಯಾಬಾದ (ಜೆ) ಗ್ರಾಪಂ.ನಲ್ಲಿ ರಾಜೀವಗಾಂಧಿ ಯೋಜನೆಯಡಿಯಲ್ಲಿ ಅಂಗವಿಕಲತೆಯ ಫಲಾನುಭವಿಗಳ ಆಯ್ಕೆಯಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸಬೇಕೆಂದು ದಲಿತ ರಕ್ಷಣಾ ವೇದಿಕೆ ಆಗ್ರಹಿಸಿದೆ. ಈ ಕುರಿತು ವೇದಿಕೆ ಜಿಲ್ಲಾಧ್ಯಕ್ಷ ಅಂಬಾದಾಸ ಗಾಯಕವಾಡ ಅವರು ಜಿಪಂ ಸಿಇಒಗೆ ಮನವಿ ಸಲ್ಲಿಸಿ, ಯೋಜನೆಯಡಿಯಲ್ಲಿ ಒಟ್ಟು 44 ಅಂಗವಿಕಲ ಫಲಾನುಭವಿಗಳ ಹೆಸರು ಆಯ್ಕೆಯಾಗಿವೆ. ಆದರೆ ಆಯಾ ಗ್ರಾಮಗಳಲ್ಲಿ ಆಯ್ಕೆಯಾದ ಫಲಾನುಭವಿಗಳ ಮನೆಗಳು ನಿಜವಾದ ಅಂಗವಿಕಲರಿಗೆ ದೊರಕಿಲ್ಲವೆಂದು ದೂರಿದ್ದಾರೆ. ಯೋಜನೆಯಡಿ ಬಂದಂತಹ ಫಲಾನುಭವಿಗಳ ಮತ್ತು ವ್ಯಕ್ತಿಗಳ ಗುರುತಿನ ಚೀಟಿ ಪರಿಶೀಲಿಸದೆ ಆಯ್ಕೆ ಮಾಡಲಾಗಿದ್ದು, ಇದನ್ನು ಪುನಃ ಪರಿಶೀಲಿಸಿ ನಿಜವಾದ ಅಂಗವಿಕಲರಿಗೆ ಮಂಜೂರು ಮಾಡಬೇಕೆಂದು ಗಾಯಕವಾಡ ಆಗ್ರಹಿಸಿದ್ದಾರೆ.