ಬೀದರ್: ಜಿಲ್ಲೆಯ ಸವಾಂರ್ಗೀಣ ಅಭಿವೃದ್ಧಿಗಾಗಿ ಅಲ್ಪಾವಧಿ ಹಾಗೂ ದೀರ್ಘಾವಧಿ ಯೋಜನೆಗಳನ್ನು ಜಾರಿಗೊಳಿಸುವ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಭವಿಷ್ಯದಲ್ಲಿ ಅಭಿವೃದ್ಧಿ ಪಥವನ್ನು ತುಳಿಯುವ ಭರವಸೆ ಹೊಂದಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ. ಪಿಸಿ ಜಾಫರ್ ತಿಳಿಸಿದರು.
ಇಲ್ಲಿನ ರೋಟರಿ ಕ್ಲಬ್ ಮತ್ತು ಇನ್ನರ್ವ್ಹೀಲ್ ಕ್ಲಬ್ ಜಂಟಿಯಾಗಿ ಆಯೋಜಿಸಿದ್ದ ಸಭೆಯಲ್ಲಿ ಬೀದರ್ ಅಭಿವೃದ್ಧಿ ಯೋಜನೆ ಕುರಿತಂತೆ ಮಾತನಾಡಿ, ಈ ಕುರಿತು ವಿವರಿಸಿ ಮಾನವ ಅಭಿವೃದ್ಧಿ ಸೂಚ್ಯಂಕ ವರದಿಯನ್ನು ಸಿದ್ದಪಡಿಸಲಾಗುತ್ತಿದೆ ಎಂದರು.
ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ಪರಂಪರೆ, ಕುಡಿಯುವ ನೀರು ಪೂರೈಕೆ, ವಿಮಾನ ಸಂಪರ್ಕ ಸೌಲಭ್ಯ, ಮೂಲಸೌಕರ್ಯ ಕ್ಷೇತ್ರಗಳ ಪ್ರಗತಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ದಿಕ್ಸೂಚಿ: 2001ರಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಕಾರ ಬೀದರ್ ಜಿಲ್ಲೆಯು ಹಿಂದುಳಿವಿಕೆಯಲ್ಲಿ 21ನೇ ಸ್ಥಾನವನ್ನು ಹೊಂದಿದ್ದೇವೆ. ಅಷ್ಟೇ ಅಲ್ಲ, ಡಾ. ಡಿ.ಎಂ ನಂಜುಂಡಪ್ಪ ವರದಿ ಪ್ರಕಾರ 5 ತಾಲೂಕುಗಳ ಪೈಕಿ ನಾಲ್ಕು ಅತಿ ಹಿಂದುಳಿದ ಮತ್ತು ಒಂದು ಹಿಂದುಳಿದ ತಾಲೂಕಿಗೆ ಸೇರಿದ್ದಾಗಿದೆ. ಇದನ್ನೆಲ್ಲವನ್ನೂ ದಿಕ್ಸೂಚಿಯಾಗಿಟ್ಟುಕೊಂಡು ಅಭಿವೃದ್ಧಿಯತ್ತ ಸಾಗಬೇಕಾಗಿದೆ ಎಂದರು.
ಮಾನವ ಸಂಪನ್ಮೂಲ ಅಭಿವೃದ್ಧಿ ಸೂಚ್ಯಂಕ ವರದಿಯು ಜಿಲ್ಲೆಯ ವರದಿ ತಯಾರಿಸುತ್ತಿದ್ದು, ಈ ಮೂಲಕ ಅಭಿವೃದ್ಧಿ ಪಥದತ್ತ ಸಾಗಬೇಕಿದ್ದ ನಾವುಗಳು ಎಲ್ಲಿ ಎಡವುತ್ತಿದ್ದೇವೆ ಎಂಬುದನ್ನು ನಿಖರವಾಗಿ ಪತ್ತೆ ಹಚ್ಚಿ ಆಯಾ ಸ್ಥರದಲ್ಲಿ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಅಭಿವೃದ್ಧಿಯ ಉತ್ತುಂಗಕ್ಕೇರುವ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದರು.
ಗುಣಮಟ್ಟದ ಶಿಕ್ಷಣ: ಇನ್ನು ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಹಿನ್ನೆಲೆಯಲ್ಲಿ ನಕಲುರಹಿತ ಪರೀಕ್ಷೆಗಳನ್ನು ನಡೆಸುವ ಉದ್ದೇಶವನ್ನು ನಾವೀಗಾಗಲೇ ಮುಂದುವರೆಸಿಕೊಂಡು ಬಂದಿದ್ದೇವೆ. ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಕಲ್ಪಿಸುವ ಮೂಲಕ ಹಿಂದುಳಿವಿಕೆಯಿಂದ ಹೊರಬರಬೇಕಿದೆ ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಸತತವಾಗಿ ಕೊನೆ ಸ್ಥಾನದಲ್ಲಿರುತ್ತಿರುವ ನಾವುಗಳು ಮುಂದೆ ಬರಬಹುದು. ಅಷ್ಟೇ ಅಲ್ಲ, ಸರ್ಕಾರಿ ಉದ್ಯೋಗ ಸೇರಿದಂತೆ ಮತ್ತಿತರೆಡೆ ಉದ್ಯೋಗ ಅವಕಾಶಗಳನ್ನು ನಮ್ಮದಾಗಿಸಿಕೊಳ್ಳಲು ಅನುಕೂಲಕರವಾಗಬಲ್ಲದು ಎಂದರು.
ಈ ಹಿನ್ನೆಲೆಯಲ್ಲಿ ಫಲಿತಾಂಶದ ಪ್ರಮಾಣವನ್ನು ಉತ್ತಮ ಪಡಿಸಲು ಈಗಾಗಲೇ ಪದವಿಪೂರ್ವ ಶಿಕ್ಷಣ ಹಂತದಲ್ಲಿ ಮಾದರಿ ಪರೀಕ್ಷೆ, ವಿಶೇಷ ಉಪನ್ಯಾಸಗಳ ಆಯೋಜನೆಗೆ ಯೋಜಿಸಲಾಗಿದೆ. ಜಿಲ್ಲಾ ಪಂಚಾಯತ್ ಮೂಲಕ ಅತಿಥಿ ಶಿಕ್ಷಕರಿಗಾಗಿ ರು. 25ಲಕ್ಷ ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿಗಳ ಬುದ್ಧಿಮಟ್ಟವನ್ನು ಉತ್ತಮಪಡಿಸಲು ಶಾಶ್ವತವಾದ ಕೇಂದ್ರ ಸ್ಥಾಪಿಸುವ ಗುರಿಯಿದೆ ಎಂದರು.
ಪ್ರವಾಸೋದ್ಯಮ: ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಆಂಧ್ರ ಪ್ರದೇಶದ ಜೊತೆ ಒಪ್ಪಂದ ಮಾಡಿಕೊಳ್ಳಲು ಸರ್ಕಾರದ ಹಂತದಲ್ಲಿ ಯತ್ನ ನಡೆದಿದೆ. ಈಗಾಗಲೇ ಬೆಂಗಳೂರಿನೊಂದಿಗೆ ಆಂಧ್ರದ ಅನಂತಪುರ ಜಿಲ್ಲೆ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದ್ದು, ಅದರಂತೆ ಬೀದರ್ ಕೂಡ ಆಗಲಿ ಎಂಬುದು ನಮ್ಮ ಆಸೆಯಾಗಿದೆ ಎಂದರು.
ಅಷ್ಟೇ ಅಲ್ಲ, ಬೀದರ್ ಐತಿಹಾಸಿಕ ತಾಣಗಳಿಗೆ ಯುನೆಸ್ಕೋ ಮಾನ್ಯತೆ ಕಲ್ಪಿಸಿಕೊಳ್ಳಲು ಪ್ರಯತ್ನಗಳು ನಡೆದಿದ್ದು, ಬೀದರ್ನ ಸುತ್ತಮುತ್ತಲಿರುವ ಪುರಾತನ ಕರೇಜ್ ವ್ಯವಸ್ಥೆಯನ್ನು ಮುಂದಿಟ್ಟುಕೊಂಡು ಈ ಯತ್ನ ನಡೆದಿದ್ದು ಇತಿಹಾಸ ತಜ್ಞರನ್ನೂ ಕರೆಯಿಸಿ ಈ ಕುರಿತಂತೆ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ನೆರವು: ಹಾಗೆಯೇ ಆರೋಗ್ಯ ಕ್ಷೇತ್ರವನ್ನು ಪರಿಗಣಿಸಿದರೆ ಈಗಾಗಲೇ ಪೌಷ್ಟಿಕತೆ ಉತ್ತಮಪಡಿಸಲು ಬಿಲ್ ಮತ್ತು ಮಿಲಿಂದಾ ಫೌಂಡೇಶ್ನ ಮೂಲಕ ಮತ್ತು ನ್ಯಾ. ಎನ್ಕೆ ಪಾಟೀಲ್ ಅವರ ವರದಿ ಆಧರಿಸಿ ಅಗತ್ಯ ನೆರವು ಮತ್ತು ಪ್ರತ್ಯೇಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ ಪೈಲಟ್ ಯೋಜನೆಯಡಿ ಭಾಲ್ಕಿ ತಾಲೂಕಿನ ಅಂಗನವಾಡಿಗಳಿಗೆ ಮೂಲ ಸೌಕರ್ಯವನ್ನು ಒದಗಿಸಲಾಗಿದೆ ಎಂದು ಹೇಳಿದರು.
ಕುಡಿಯುವ ನೀರು ಪೂರೈಕೆ ವಿಷಯದಲ್ಲಿಯೂ ಪ್ರಗತಿ ಆಗುತ್ತಿದ್ದು, ಈಗಾಗಲೇ ಗ್ರಾಮೀಣ ಭಾಗದಲ್ಲಿ ಚಾಲ್ತಿಯಲ್ಲಿದ್ದ 310 ಯೋಜನೆಗಳ ಪೈಕಿ 290 ಕುಡಿಯುವ ನೀರು ಪೂರೈಕೆ ಯೋಜನೆಗಳು ಪೂರ್ಣಗೊಂಡಿವೆ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹಾಗೂ ಭವಿಷ್ಯ ನಿರ್ಮಾಣದ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ಮತ್ತು ತರಬೇತಿ ನೀಡಲು ಖಾಸಗಿ ಶಿಕ್ಷಣ ಸಂಸ್ಥೆಯ ಸಹಭಾಗಿತ್ವದಲ್ಲಿ ಕೇಂದ್ರ ಸ್ಥಾಪಿಸಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಏರ್ಪಡಿಸಲಾಗುತ್ತದೆ. ಇದಲ್ಲದೆ ಈ ಕೇಂದ್ರ ಯುಪಿಎಸ್ಸಿ ಪರೀಕ್ಷೆ ಎದುರಿಸುವ ಆಕಾಂಕ್ಷಿಗಳಿಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಜಾಫರ್ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಉಜ್ವಲ್ ಘೋಷ್ ಮಾತನಾಡಿ, ಪಂಚಾಯತ್ ವ್ಯಾಪ್ತಿಯ ಎಲ್ಲ ಇಲಾಖೆಗಳ ಕಾರ್ಯವೈಖರಿಯನ್ನು ಪಾರದರ್ಶಕ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಕಾರ್ಯಾಗಾರದಲ್ಲಿ ರೋಚರಿ ಮತ್ತು ಇನ್ನರ್ ವ್ಹೀಲ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.