ಹುಮನಾಬಾದ್: ತೊಗರಿ ಬೆಲೆ ಇಳಿಮುಖವಾಗಿ ರೈತರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ತೊಗರಿ ಕೇಂದ್ರ ಪ್ರಾರಂಭಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ತಿಳಿಸಿದರು. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ತೊಗರಿ ಮಂಡಳಿಯವರ ಮುಖಾಂತರ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿ ಖರೀದಿಸುವ ಕೇಂದ್ರವನ್ನು ಪ್ರಾರಂಭಿಸಿ ಮಾತನಾಡಿ, ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಆರ್ಥಿಕ ಹಿನ್ನಡೆ ಯಾಗುತ್ತಿರುವುದನ್ನು ದೂರ ಮಾಡಲು ಸರ್ಕಾರ ಖರಿದಿ ಕೇಂದ್ರ ಪ್ರಾರಂಭಿಸಿದೆ ಎಂದರು.
ರೈತರ ಅನುಕೂಲಕ್ಕಾಗಿ ವಿವಿಧ ಯೋಜನೆಗಳು ಹಮ್ಮಿಕೊಳ್ಳಲಾಗಿದೆ ಮುಂಬರುವ ದಿನಗಳಲ್ಲಿ ಎಪಿಎಂಸಿ ಅಭಿವೃದ್ಧಿಪಡಿಸಲಾಗುವುದು ಎಂದರು. ಉಪಾಧ್ಯಕ್ಷ ಅಶೋಕಕುಮಾರ ಚಳಕಾಪೂರೆ, ಸದಸ್ಯರಾದ ಸಂಜುರೆಡ್ಡಿ ಬಿರಾದಾರ, ಶಶಿಕಾಂತ ಗಂಗಶಿರಿ, ಕಾರ್ಯದರ್ಶಿ ಶಿವಶರಣಪ್ಪಾ ಮಜಗೆ ಹಾಗೂ ಎಪಿಎಂಸಿ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.