'ಗಣಿತ, ಇಂಗ್ಲಿಷ್ ಹೆಚ್ಚುವರಿ ಬೋಧನೆ'

Updated on: 

ಬೀದರ್: ಗಣಿತ ಹಾಗೂ ಇಂಗ್ಲೀಷ ವಿಷಯಗಳಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಹೋಬಳಿ ಮಟ್ಟದಲ್ಲಿ ಒಂದುಗೂಡಿಸಿ ವಿಷಯ ಸಂಪನ್ಮೂಲ ವ್ಯಕ್ತಿಗಳಿಂದ ವರ್ಗಗಳು ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಾಂತ ಮದಾನೆ ತಿಳಿಸಿದರು.
  ನಗರದ ಕಲ್ಯಾಣ ಭಾರತಿ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾನುವಾರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಉತ್ತಮಗೊಳಿಸಲು ರಾಮಕೃಷ್ಣ ಆಶ್ರಮದಲ್ಲಿ 42 ದಿನದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಶ್ಲಾಘನೀಯ: ಜಿಲ್ಲೆಯ ಫಲಿತಾಂಶ ಪ್ರತಿ ವರ್ಷ ಶೇ. 3ರಿಂದ 4ರಷ್ಟು ಹೆಚ್ಚಾಗುತ್ತಿರುವದು ಸ್ವಾಭಾವಿಕ. ಅದರಲ್ಲಿ ವಿಶೇಷ ಪ್ರಯತ್ನ ಇರುವುದಿಲ್ಲ ಆದ್ದರಿಂದ ವಿದ್ಯಾರ್ಥಿಗಳಿಗೆ ಇಂತಹ  ವಿಶೇಷ ಕಾರ್ಯಾಗಾರ ನಡೆಸುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.
ಸಾನಿಧ್ಯ ವಹಿಸಿದ ಆಶ್ರಮದ ಪೂಜ್ಯ ಜ್ಯೋತಿರ್ಮಯಾನಂದ ಸ್ವಾಮಿ ಮಾತನಾಡಿ, ಸ್ವಾಮಿ ವಿವೇಕಾನಂದರ ಬುದ್ಧಿವಂತಿಕೆಯ ಉದಾಹರಣೆ ನೀಡಿ ಯಾವುದೇ ಕಾರ್ಯಕ್ರಮ ಮಾಡಬೇಕಾದರೆ ಅದಕ್ಕೆ ಪೂರ್ವ ಯೋಜನೆ ನೀಲಿ ನಕ್ಷೆ ಇದ್ದರೆ ಸರಿಯಾಗುತ್ತದೆ ಎಂದರು.
ಶರೀರವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಮಾತ್ರ ಮನಸ್ಸು ಏಕಾಗ್ರತೆಗೆ ಬಂದು ಅನಂತ ಶಕ್ತಿ ಉತ್ಪತ್ತಿಯಾಗುತ್ತದೆ. ಇಂದಿನ ವಿದ್ಯಾರ್ಥಿಗಳು ಬಹಳ ಬುದ್ಧಿವಂತರಾಗಿದ್ದಾರೆ. ಆದರೆ ಅವರ ಏಕಾಗ್ರತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಹಂಚಿ ಹೋಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಾಣಾಯಾಮ: ಶಿಕ್ಷಣದ ಮೊದಲನೆ ಗುರಿ ಏಕಾಗ್ರತೆ. ಇದನ್ನು ಪಡೆಯಲು ಧ್ಯಾನ, ಯೋಗ ಹಾಗೂ ಪ್ರಾಣಾಯಾಮ ರೂಢಿಸಿಕೊಳ್ಳಬೇಕು. ಗುರಿ ಮತ್ತು ದಾರಿ ಉತ್ತಮವಾಗಿದ್ದರೆ ಸಾಧನೆ ಮಾಡಲು ಕಷ್ಟವಾಗುವುದಿಲ್ಲ ಎಂದು ಸ್ವಾಮೀಜಿ ನುಡಿದರು. ಅಧ್ಯಕ್ಷತೆ ವಹಿಸಿದ್ದ ಡಾ. ಹಣಮಂತ ರಾವ್ ಭರಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ 10ನೇ ವರ್ಗ ಒಂದು ವಿಶೇಷ ಹಂತವಾಗಿದ್ದು, ಇದರಲ್ಲಿ ಶ್ರಮ ವಹಿಸಿ ಅಭ್ಯಾಸ ಮಾಡಿ ಇನ್ನೊಬ್ಬರಿಗೆ ಆದರ್ಶರಾಗಬೇಕೆಂದರು. ಪಾಲಕರ ಪರವಾಗಿ ಪಂಚಯ್ಯ ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಓದಿದರೆ ಫಲಿತಾಂಶ ಸರಿಯಾಗಿ ಬರುತ್ತದೆ. ಅಲ್ಲದೆ ಈ ಸಂಸ್ಥೆಯಲ್ಲಿ 10ನೇ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ವೈಯಕ್ತಿಕವಾಗಿ ರು. 2001 ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.
 ಶಾಮ ಸಾಗರ ಸ್ವಾಗತಿಸಿ, ರಮೇಶಕುಮಾರ ಪ್ರಾಸ್ತಾವಿಕ ಮಾತನಾಡಿದರು. ಗಾಯತ್ರಿ ಉದಗೀರೆ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com