ಅಧಿಕಾರ ಮರೆತು ಶರಣರ ಸಂಗ ಮಾಡಿ

Updated on: 

ಬಸವಕಲ್ಯಾಣ: ಕೂಡಲ ಸಂಗನ ನೆನೆಯಬೇಕಾದರೆ ಶರಣರನ್ನು ನೆನೆಯಬೇಕು. ಯಾವುದೇ ಸಮಾರಂಭದಲ್ಲಿ ಅಧಿಕಾರವನ್ನು ಮರೆತು ಕುಳಿತುಕೊಳ್ಳುವುದೇ ಶರಣರ ಸಂಗ ಎನಿಸಿಕೊಳ್ಳುತ್ತದೆ ಎಂದು ಬಿಜಾಪುರ ಜ್ಞಾನ ಯೋಗಾಶ್ರವುದ ಸಿದ್ದೇಶ್ವರ ಸ್ವಾಮಿಗಳು ನುಡಿದರು.
 ತಾಲೂಕಿನ ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ಲಿಂ. ಬಸವಕುಮಾರ ಶಿವಯೋಗಿಗಳ 37ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಬಸವ ಜಯಂತಿ ಆಚರಣೆಯ ಶತಮಾನೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವದ 2ನೇ ದಿನವಾದ ಸೋಮವಾರ ಡಾ. ಜಯದೇವಿತಾಯಿ ಲಿಗಾಡೆಯವರ ಜನ್ಮ ಶತಮಾನೋತ್ಸವ ಹಾಗೂ ಬಸವ ಭಾರತ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು.
ಎಲ್ಲರೂ ಸರಿಸಮಾನರು: ಮುಖದಲ್ಲಿ ಪ್ರಸನ್ನತೆ, ಧ್ವನಿಯಲ್ಲಿ ಮಾಧುರ್ಯ, ಮನಸ್ಸಿನಲ್ಲಿ ಶಾಂತಿ ನೆಲೆಸಿದರೆ ಸಮಾಧಾನವಾಗುತ್ತದೆ. ಶಿವಪಥ ಅರಿಯಲು ಪ್ರಯತ್ನಿಸಬೇಕು. ಜಗತ್ತಿನಲ್ಲಿ ಯಾವುದೂ ಹೆಚ್ಚಲ್ಲ. ಯಾವುದೂ ಕಡಿಮೆಯಲ್ಲ. ಎಲ್ಲರೂ ಸರಿಸಮಾನರಾಗಿದ್ದಾರೆ ಎಂದು ಹೇಳಿದರು.
  ಒಳಗೆ- ಹೊರಗೆ ಶುದ್ಧವಾಗಿರಬೇಕು. ಆದಾಗಲೇ ದೇವರನ್ನು ಒಲಿಸುವ ಪರಿಯಾಗುತ್ತದೆ. ಕಲ್ಲಿನಿಂದ ಮನೆ ಕಟ್ಟದೇ ಪ್ರೇಮದ ಹೃದಯದಿಂದ ಮನೆ ಕಟ್ಟಿ, ಜ್ಞಾನದ ಸಂತೋಷವಿದ್ದಾಗ ಅದು ಸಾಧನೆ ಎನಿಸಿಕೊಳ್ಳುತ್ತದೆ ಎಂದು ವಿವರಿಸಿದರು.
  ಸಾಹಿತಿ ಡಾ. ಬಸವರಾಜ ಬಲ್ಲೂರ್ ಮಾತನಾಡಿ, ಆಧುನಿಕತೆಯ ಜಾಗತೀಕರಣದ ಸಾಂಸ್ಕೃತಿಕ ಸಂದರ್ಭದಲ್ಲಿ ಯಾಂತ್ರಿಕ ಬದುಕಿನಿಂದ ನೆಲ, ನಿಷ್ಠ ಸಂಸ್ಕೃತಿ, ಅದಮ್ಯವಾದ ಜೀವನ ಪ್ರೀತಿ, ಉತ್ಸಾಹ ಕಳೆದುಕೊಳ್ಳುತ್ತಿದ್ದೇವೆ. ಜಾಗತಿಕ ಮಾರುಕಟ್ಟೆಯ ವಸ್ತು ವ್ಯಾವೋಹದಲ್ಲಿ ಕಳೆದು ಹೋಗುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಡಾ. ಲಿಗಾಡೆ ಜನರ ಬದುಕು ಕಟ್ಟಲು ನೆರವಾದ್ರು: ಡಾ. ಜಯದೇವಿ ತಾಯಿ ಲಿಗಾಡೆ ಆಗರ್ಭ ಶ್ರೀಮಂತ ಮನೆತನದಿಂದ ಬಂದರೂ ಅತ್ಯಂತ ಸರಳ ಸಜ್ಜನಿಕೆ ಮೈಗೂಡಿಸಿಕೊಂಡಿದ್ದರು. ಅದಕ್ಕೆ ಅವರು ಬೆಳೆದಿರುವ ಪರಿಸರವೇ ಕಾರಣವಾಗಿತ್ತು ಎಂದು ವಿವರಿಸಿದರು. ಜಯದೇವಿಯವರ ತಂದೆ ಚನ್ನಬಸವ ಮಡಕಿ, ಸಾಮಾಜಿಕ ಧಾರ್ಮಿಕ, ಶೈಕ್ಷಣಿಕ ಕಾಳಜಿಗಳ ಮೂಲಕ ಪ್ರಗತಿಪರ ಅಲೋಚನೆಗಳೊಂದಿಗೆ ಸುತ್ತಲಿನ ಜನರ ಬದುಕು ಕಟ್ಟಲು ನೆರವಾದವರು. ವಾರದ ಮತ್ತು ಮಡಕಿ ಮನೆತನಗಳೆರಡಾದರೂ ಇರಲು ಸೂರು ಒಂದೇಯಾಗಿತ್ತು. ಅವಿಭಕ್ತ ಕುಟುಂಬದ ಮೂಲಕ ಆದರ್ಶ ಮೆರೆದಿದ್ದಾರೆ ಎಂದು ಉಲ್ಲೇಖಿಸಿದರು.
ಸಮಾಜ ಕೀಳು ಮಟ್ಟಕ್ಕೆ..: ಜ್ಞಾನ ಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಪೂಣಿರ್ಮಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯ ಮೇಲಾಗುತ್ತಿರುವ ಅತ್ಯಾಚಾರ, ದೌರ್ಜನ್ಯಗಳು ಮನಕಲಕುವಂತಾಗಿವೆ. ವೇದ ಉಪನಿಷತ್ತುಗಳಲ್ಲಿ, ಧರ್ಮಗ್ರಂಥ ಗಳಲ್ಲಿರುವ ಹೆಣ್ಣಿನ ಸ್ಥಾನಮಾನಕ್ಕೆ ಸಮಾಜ ಎಂಥ ಕೀಳು ಮಟ್ಟಕ್ಕೆ ಕೊಂಡೊಯ್ಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
  ಇದೇ ವೇಳೆ ಮಾಜಿ ಶಾಸಕ ಸುಭಾಷ ಕಲ್ಲೂರ್ ಮಾತನಾಡಿ, ಜಗತ್ತಿನಲ್ಲಿ ಎಲ್ಲ ರೋಗಕ್ಕೆ ದಿವ್ಯೌಷಧವೆಂದರೆ ಸಿದ್ಧೇಶ್ವರ ಸ್ವಾಮಿಗಳ ಪ್ರವಚನ. ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂದರೆ ರಾಮ ರಾಜ್ಯದ ಕನಸು ನನಸಾಗಿಸಲು ಸಾಧ್ಯವಾಗುತ್ತದೆ ಎಂದು ನುಡಿದರು.
ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿನ 101 ಸಾಧಕರಿಗೆ ಶ್ರೀಗಳು ಗೌರವ ಸನ್ಮಾನ ಮಾಡಿದರು. ವೇದಿಕೆಯಲ್ಲಿ ಬಸವರಾಜ ಭರಶೆಟ್ಟಿ, ಮಲ್ಲಿಕಾರ್ಜುನ ರಾಜೋಳೆ, ವೈಜಿನಾಥ ಕಾಮಶೆಟ್ಟಿ, ವೈಜಿನಾಥ ಸಜ್ಜನಶೆಟ್ಟಿ, ಅನೀಲ ಹೊಳಸಮುದ್ರ, ಮಲ್ಲಿಕಾರ್ಜುನ ಗಾಜರೆ ಮುಂತಾದ ಪ್ರಮುಖರು ಇದ್ದರು. ಸುರೇಶ ಚೆನ್ನಶೆಟ್ಟಿ ನಿರೂಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com