ಔರಾದ್: ಸಹಕಾರ ತತ್ವದಿಂದ ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ನನಸು ಮಾಡಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ಗುರಪಾದಪ್ಪ ನಾಗಮಾರಪಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸಣ್ಣ ನೀರಾವರಿ ಇಲಾಖೆ ಕಚೇರಿ ಆವರಣದಲ್ಲಿ ಸೋಮವಾರ ಸಹಕಾರ ಸೌಹಾರ್ದ ಪರಿಷತ್ ವತಿಯಿಂದ ಆಯೋಜಿಸಲಾದ ಸಹಕಾರ ತತ್ವ ಸಮ್ಮೇಳನದಲ್ಲಿ 'ಸಹಕಾರ ಭೀಷ್ಮ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಸಹಕಾರ ತತ್ವದ ಅಳವಡಿಕೆಯಿಂದಾಗಿ ಇಡೀ ಜಿಲ್ಲೆಯಲ್ಲಿ ಸಹಕಾರ ಕ್ರಾಂತಿಯ ಅಲೆ ಎದ್ದಿದೆ ಎಂದರು.
ನನ್ನ ಬಳಿ ಯಾವುದೇ ಪದವಿ ಇಲ್ಲದಿರಬಹುದು. ಆದರೆ ಗ್ರಾಮೀಣ ಭಾಗದ ಜನರಿಂದ ವ್ಯವಹಾರದ ಪದವಿ ದೊರೆತಿದೆ. ರು. 1600ದಿಂದ ಪ್ರಾರಂಭವಾದ ಬ್ಯಾಂಕಿನ ವ್ಯವಹಾರ ಇದೀಗ ರು. 1400 ಕೋಟಿ ಬಂಡವಾಳದೊಂದಿಗೆ ಬೃಹತ್ ಬ್ಯಾಂಕ್ ಆಗಿ ಹೊರಹೊಮ್ಮಿದ್ದು ಇಡೀ ದೇಶವೇ ಬೀದರ್ನತ್ತ ಮುಖ ಮಾಡುವಂತಾಗಿದೆ ಎಂದರು.
ಸಹಕಾರ ಭೀಷ್ಮ ಪ್ರಶಸ್ತಿ: ಸರ್ಕಾರ ನೀಡುವ ಪ್ರಶಸ್ತಿಯಿಂದ ಸ್ಪೂರ್ತಿ ಸಿಗದು ಆದರೆ ಜನರ ಪ್ರೀತಿ ವಿಶ್ವಾಸದಿಂದ ನೀಡಿದ ಸಹಕಾರ ಭೀಷ್ಮ ಪ್ರಶಸ್ತಿ ಸಂತಸ ತಂದಿದೆ. ಮನುಷ್ಯ ಜೀವನದಲ್ಲಿ ಬಂದಾಗ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವಂತರಾಗಬೇಕು. ಇಲ್ಲವಾದಲ್ಲಿ ಮಾನವನ ಜೀವನ ವ್ಯರ್ಥ ಎಂದು ನಾಗಮಾರಪಳ್ಳಿ ತಿಳಿಸಿದರು.
ಕುಡಿದು ಬರುವ ಗಂಡನಿಗೆ ಊಟ ನೀಡದಿರಿ: ಹೆಂಡ ಕುಡಿದು ಮನೆಗೆ ಬರುವ ಗಂಡನಿಗೆ ಊಟ ನೀಡಬೇಡಿ ಎಂದು ಗ್ರಾಮೀಣ ಭಾಗದ ಮಹಿಳೆಯರಿಗೆ ಸಲಹೆ ನೀಡಿದ ಅವರು ನಿಮ್ಮ ಗಂಡಂದಿರು ನನಗೆ ಚುನಾವಣೆಯಲ್ಲಿ ಮತ ನೀಡಲಿ ನೀಡದೇ ಇರಲಿ ಯಾವುದೇ ಕಾರಣಕ್ಕೂ ಗಂಡಂದಿರನ್ನು ಕುಡಿತದಿಂದ ದೂರವಿಡಿ ಎಂದು ನಾಗಮಾರಪಳ್ಳಿ ತಿಳಿಸಿದರು.
ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ವಹಿಸಿದ್ದರು.
ಉಪಸ್ಥಿತಿ: ಕೌಠಾ ಬಸವಯೋಗಾಶ್ರವುದ ಸಿದ್ದರಾಮ ಶರಣರ ನೇತೃತ್ವದ ಸಮ್ಮೇಳನದಲ್ಲಿ ಉಜನಿ ಚರ್ಚನ ಫಾದರ್ ಸಿರಿಲ್ ಲೋಬೊ, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಿಆರ್ ಕೊಂಡಾ, ಮುಖಂಡರಾದ ಗುರುನಾಥ ಕೊಳ್ಳೂರ, ಸೂರ್ಯಕಾಂತ ಅಲ್ಮಾಜೆ, ಗುಂಡಯ್ಯ ಸ್ವಾಮಿ, ಶರಣಪ್ಪ ಬಿರಾದಾರ್, ಮಲ್ಲಿಕಾರ್ಜುನ ಟಂಕಸಾಲೆ, ಶಾಮಸುಂದರ ಖಾನಾಪೂರೆ, ಡಾ. ಗಣಪತರಾವ್ ಹೆಬ್ಬಾಳೆ, ಶರಣಬಸವ ಸಾವಳೆ ಪಾಲ್ಗೊಂಡಿದ್ದರು.