ತಿಮ್ಮಪ್ಪ ಕೈ ಹಿಡಿಯಲಿಲ್ಲ

Updated on: 

ಬೀದರ್: ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಸ್ವಗ್ರಾಮಕ್ಕೆ ವಾಪಸ್ಸಾಗುತ್ತಿದ್ದ ಮಹಾರಾಷ್ಟ್ರ ಮೂಲದ ಭಕ್ತಾದಿಗಳ ಟೆಂಪೋ ಜಿಲ್ಲೆಯ ಮರಕುಂದಾ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ ಮೇಲೆ ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ 7 ಜನ ಮೃತಪಟ್ಟು 8 ಜನ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
 ಸಂಜೆ 7ರ ಸುಮಾರಿಗೆ ಹುಮನಾಬಾದ್ ಕಡೆಯಿಂದ ಬರುತ್ತಿದ್ದ ಲಾರಿ ಪ್ರವಾಸಿ ಟೆಂಪೋಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ ಮಹಾರಾಷ್ಟ್ರ ರಾಜ್ಯ ಸಾಂಗ್ಲಿ ತಾಲೂಕಿನ ಖಾಸರಗಾಂವ್ ಗ್ರಾಮದ ಸುಮಾರು 11 ಜನರ ಪೈಕಿ 7 ಜನ ಮೃತಪಟ್ಟಿದ್ದು 8ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಿವೆ. ತಕ್ಷಣವೇ ಮನ್ನಾಎಖ್ಖೆಳ್ಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು ಹಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ತಿರುಪತಿಗೆ ತೆರಳಿದ್ದರು: ಆಂಧ್ರದ ಗಡಿಗೆ ಹೊಂದಿಕೊಂಡಿರುವಂತಿರುವ ಮರಕುಂದಾ ಗ್ರಾಮದ ಸಮೀಪದಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಅವರೆಲ್ಲರೂ ಸೋಮವಾರವಷ್ಟೇ ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿಕೊಂಡು ಸ್ವಗ್ರಾಮಕ್ಕೆ ವಾಪಸ್ಸಾಗುತ್ತಿದ್ದರು ಎಂದು ಹೇಳಲಾಗಿದೆ.
  ಅಪಘಾತದಲ್ಲಿ ಶಂಕರ ದತ್ತಾತ್ರೆಯ ಜಾಧವ್(50), ಪುಷ್ಟಾ ಶಂಕರ(45), ರಾಮಚಂದ್ರ(70), ಸುನೀತಾ ರಾಮಚಂದ್ರ(60), ಕೃಷ್ಣಾ ಮೊಹಿತೆ(50), ರೇಖಾ ಅಣ್ಣಾಸಾಹೇಬ್ ಮಹಾಜನ(50), ಟೆಂಪೋ ಚಾಲಕ ಸೋಲ್ಲಾಪುರದವನಾಗಿದ್ದು ಹೆಸರು ತಿಳಿದುಬಂದಿಲ್ಲ.
ಗಾಯಗೊಂಡವರು: ಇನ್ನು ಟೆಂಪೋದಲ್ಲಿದ್ದ ರಾಜಶ್ರೀ ಗಾಯಕವಾಡ(53), ಶೀತಲ್(55), ಅಕ್ಕಾತಾಯಿ ಕೃಷ್ಣಾ ಮೋಹಿತೆ(60), ಅಣ್ಣಾಸಾಹೇಬ ಮಹಾಜನ್(62) ಗಂಭೀರವಾಗಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
  ಅಪಘಾತದಲ್ಲಿ ಲಾರಿ ಚಾಲಕ ಹುಮನಾಬಾದ್ ತಾಲೂಕಿನ ಭಂಗೂರ್ ಗ್ರಾಮದ ಪೀರಪ್ಪ ಕಲ್ಲಪ್ಪ(38), ಚಾಲಕನ ಪುತ್ರ ಪ್ರೇಮಕುಮಾರ ಪೀರಪ್ಪ(8) ಮತ್ತು ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಭಂಗೂರ್ ಗ್ರಾಮದ ಪ್ರಯಾಣಿಕ ಬಸಯ್ಯ ವೀರಯ್ಯ ಸ್ವಾಮಿ(27) ಗಂಭೀರವಾಗಿ ಗಾಯಗೊಂಡಿದ್ದಾರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
  ಸ್ಥಳಕ್ಕೆ ಡಿವೈಎಸ್ಪಿ ಅಮರನಾಥ ರೆಡ್ಡಿ, ಬೆಮಳಖೇಡಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಧಾವಿಸಿದ್ದು ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಬೆಮಳಖೇಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com