ಬೀದರ್: ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆಯಿಂದ ಜ. 24ರಂದು ಬಡವರ, ದಲಿತರ ಸಬಲೀಕರಣಕ್ಕಾಗಿ ಸಂವಿಧಾನ ಆಶಯ ಅನುಷ್ಠಾನಗೊಳಿಸಲು ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಸಮಿತಿಯ ಜಿಲ್ಲಾ ಸಂಚಾಲಕರಾದ ರಾಜಕುಮಾರ ಬನ್ನೇರ್, ಬುದ್ದಪ್ರಕಾಶ ಹರ್ಗೆ, ಝರೆಪ್ಪ ರಾಂಪೂರೆ ಹಾಗೂ ಬಸವರಾಜ ಸಾಗರ ಪ್ರಕಟಣೆ ಹೊರಡಿಸಿ, ದೇಶದಲ್ಲಿ ಡಾ. ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಜಾರಿಗೆ ಬಂದು 63 ವರ್ಷಗಳು ಗತಿಸುತ್ತಿದ್ದರೂ ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ಎಲ್ಲ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದಲಿತರ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಸಮುದಾಯಗಳನ್ನು ಕಡೆಗಣಿಸಲಾಗುತ್ತಿದ್ದು ಸರ್ಕಾರಗಳು ದಲಿತರ ಅಭಿವೃದ್ಧಿಯ ಬೂಟಾಟಿಕೆಯ ಮಾತುಗಳನ್ನು ನಿಲ್ಲಿಸಿ ಸಂವಿಧಾನದ ಆಶಯಗಳನ್ನು ಜಾರಿಗೊಳಿಸಬೇಕೆಂದು ಡಿಎಸ್ಎಸ್ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡಿದೆ.ಅಂದು ಮಧ್ಯಾಹ್ನ 12ಕ್ಕೆ ನಗರದ ಡಾ. ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ನಡೆಯಲಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲೆಯ ಎಲ್ಲ ಪದಾಧಿಕಾರಿಗಳು, ವಿಚಾರವಂತರು ಹಾಗೂ ಪ್ರಗತಿಪರರು ಭಾಗವಹಿಸಬೇಕೆಂದು ಕೋರಿದ್ದಾರೆ.