ಗುಲ್ಬರ್ಗ: ಆರೋಗ್ಯ ಕವಚ 108ರ ಮಾದರಿಯಲ್ಲೇ ರೈತರ ಮನೆ ಬಾಗಿಲಿಗೇ ಜಾನುವಾರು ಆರೋಗ್ಯ ಸೇವೆ ನೀಡುವ ಉದ್ದೇಶದ ಸಂಚಾರಿ ಪಶು ಚಿಕಿತ್ಸಾಲಯ ಧನ್ವಂತರಿ ಸೇವೆಗೆ ಕೊನೆಗೂ ಚಾಲನೆ ದೊರಕಿದೆ.
ಕಳೆದ 2 ವರ್ಷಗಳ ಹಿಂದೆಯೇ ಬಜೆಟ್ನಲ್ಲಿ ಘೋಷಣೆಯಾಗಿದ್ದರೂ ನೆನೆಗುದಿಗೆ ಬಿದ್ದಿದ್ದ ಈ ಮಹತ್ವದ ಯೋಜನೆಯನ್ನು ಸಿಎಂ ಶೆಟ್ಟರ್ ಬುಧವಾರ ಗುಲ್ಬರ್ಗದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಕಿರು ಹೊತ್ತಿಗೆ ಬಿಡುಗಡೆಗೊಳಿಸಿ, ಆದೇಶ ಪತ್ರವನ್ನು ಗುತ್ತಿಗೆದಾರ ಸ್ಪ್ಯಾನ್ ಸಂಸ್ಥೆ ಪ್ರತಿನಿಧಿಗಳಿಗೆ ನೀಡುವ ಮೂಲಕ ಉದ್ಘಾಟಿಸಿದರು.
12 ಕೋಟಿ ವೆಚ್ಚದಲ್ಲಿ ಪಶು ಸಂಗೋಪನಾ ಇಲಾಖೆ ಜಾರಿಗೆ ತರುತ್ತಿರುವ ಈ ಯೋಜನೆಗೆ ಬೆಂಗಳೂರಿನ ಸ್ಪ್ಯಾನ್ ಸಂಸ್ಥೆ ಸಹಭಾಗಿತ್ವ ದೊರಕಿದೆ. ಪ್ರಾಯೋಗಿಕವಾಗಿ ಹೈ-ಕ ನೆಲದ ಗುಲ್ಬರ್ಗ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ 26 ತಾಲೂಕುಗಳ ಜಾನುವಾರುಗಳಿಗೆ ಈ ತುರ್ತು ಆರೋಗ್ಯ ಸೇವೆ ದೊರಕಿಸಿಕೊಡಲು ಉದ್ದೇಶಿಸಲಾಗಿದೆ. ಆ್ಯಂಬುಲೆನ್ಸ್ ಸೇವೆಗೆ ಪ್ರಯೋಗಾಲಯದ ಪರಿಕರಗಳನ್ನೊಳಗೊಂಡ ಸುಸಜ್ಜಿತ ವಾಹನ ಬಂದು ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾನುವಾರುಗಳಿಗೆ ಅರ್ಪಣೆಯಾಗಲು ಇನ್ನೂ ಕೆಲವು ತಿಂಗಳುಗಳೇ ಬೇಕು.
ಫಲಾನುಭವಿ ತಾಲೂಕುಗಳು: ಬಳ್ಳಾರಿ, ಸಿರಗುಪ್ಪ, ಸಂಡೂರು, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹಡಗಲಿ, ಕೂಡ್ಲಿಗಿ, ಕೊಪ್ಪಳ, ಗಂಗಾವತಿ, ಯಲಬುರ್ಗ, ಕುಷ್ಟಗಿ, ರಾಯಚೂರು, ಮಾನವಿ, ದೇವದುರ್ಗ, ಲಿಂಗಸ್ಗೂರು, ಸಿಂಧನೂರು, ಗುಲ್ಬರ್ಗ, ಸೇಡಂ, ಅಫಜಲ್ಪುರ, ಆಳಂದ, ಜೇವರ್ಗಿ, ಚಿಂಚೋಳಿ, ಚಿತ್ತಾಪುರ, ಯಾದಗಿರಿ, ಶಹಾಪುರ, ಸುರಪುರ.
ರೈತರ ಮನೆ ಬಾಗಿಲಿಗೇ ಸೇವೆ: ಸದರಿ ಯೋಜನೆಯಡಿ ಕೋರುವ ಸೇವೆ ರೈತರ ಮನೆ ಬಾಗಿಲಿಗೇ ಬರುತ್ತದೆ. 108 ಮಾದರಿಯಲ್ಲೇ ಈ ಯೋಜನೆಗೂ ವಾಹನ ಮತ್ತು ಕಾಲ್ ಸೆಂಟರ್ ಸವಲತ್ತು ಇರುತ್ತದೆ. ಈ ಮೂಲಕ ಸೇವಾ ಕ್ಷೇತ್ರದಲ್ಲಿ ಈ ಸೇವೆ ನೀಡಲಾಗುತ್ತದೆ. ಯೋಜನೆ ರೈತ ಸಮುದಾಯಕ್ಕೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಲಭ್ಯ. ರೈತರಿಂದ ಬರುವ ದೂರುಗಳಿಗೆ ಪ್ರತಿಯಾಗಿ ತಾಲೂಕಿಗೆ ಒಂದರಂತೆ ಸಂಚಾರಿ ಧನ್ವಂತರಿ ವಾಹನವಿರುತ್ತದೆ. ಇದರಲ್ಲಿ ವೈದ್ಯರು, ಔಷಧಿ, ಅಗತ್ಯ ಪರಿಕರಗಳಿದ್ದು, ಇವರು ರಾಸುಗಳಿಗೆ ಚಿಕಿತ್ಸೆ ನೀಡುತ್ತಾರೆ.
637 ವೈದ್ಯರ ಕೊರತೆ: ರಾಜ್ಯಾದ್ಯಂತ ಪಶು ವೈದ್ಯರ ಕೊರತೆ ಹೆಚ್ಚಿದೆ. ಪ್ರಸಕ್ತ 637 ವೈದ್ಯರ ಬರ ಕಾಡುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡವರು ಪಶು ಸಂಗೋಪನಾ ಸಚಿವ ರೇವುನಾಯಕ ಬೆಳಮಗಿ. ಪ್ರಾಸ್ತಾವಿಕವಾಗಿ ಮಾತನಾಡಿ ಮಾಹಿತಿ ನೀಡಿದ ಅವರು, ಬೀದರ್, ಬೆಂಗಳೂರು, ಹಾಸನ, ಗದಗ, ಶಿವಮೊಗ್ಗದಲ್ಲಿ ಪಶು ವೈದ್ಯಕೀಯ ವಿದ್ಯಾಲಯಗಳಿದ್ದರೂ ವೈದ್ಯರ ಬರ ನೀಗುತ್ತಿಲ್ಲ ಎಂದರು.
ಇದೀಗ 391 ವೈದ್ಯರ ಭರ್ತಿಗೆ ಕ್ರಮ ಜರುಗಿಸಲಾಗುತ್ತಿದ್ದರೂ ಅರ್ಹರು ದೊರಕುತ್ತಿಲ್ಲ. 642 ಪಶು ವೈದ್ಯ ಸಹಾಯಕರ ಹುದ್ದೆ ಭರ್ತಿಗೆ ಮುಂದಾಗಿರುವಾಗಲೇ ಕಲಂ 371 ಮೀಸಲಾತಿ ಅನ್ವಯವೇ ಈ ಹುದ್ದೆ ಭರ್ತಿಗೆ ಆಗ್ರಹ ಕೇಳಿ ಬರುತ್ತಿವೆ. ಮೀಸಲು ಲೆಕ್ಕ ಹಾಕಿಯೇ ಈ ಹುದ್ದೆಗಳ ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂದರು.
ಸಚಿವ ಬಸವರಾಜ ಬೊಮ್ಮಾಯಿ, ಶಾಸಕರಾದ ವಾಲ್ಮೀಕಿ ನಾಯಕ, ಶಶೀಲ್ ನಮೋಶಿ, ಜಿಪಂ ಅಧ್ಯಕ್ಷ ಶರಣಪ್ಪ ತೇಲ್ಕೂರ್, ಬಿಜೆಪಿ ಅಧ್ಯಕ್ಷ ರಾಜಕುಮಾರ್ ತೇಲ್ಕೂರ್, ಎಚ್ಕೆಡಿಬಿ ಅಧ್ಯಕ್ಷ ಮಹಾಂತಗೌಡ ಪಾಟೀಲ್ ಇದ್ದರು.