ಬಸವಕಲ್ಯಾಣ: ಕೇಂದ್ರ ಗೃಹ ಸಚಿವ ಶಿಂಧೆ ನೀಡಿರುವ ಹೇಳಿಕೆಯನ್ನು ಖಂಡಿಸಿ ಬಿಜೆಪಿ ದೇಶಾದ್ಯಂತ ನಡೆಸಿದ ಪ್ರತಿಭಟನೆಗೆ ಬೆಂಬಲಿಸಿ ತಾಲೂಕಾ ಭಾಜಪ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ, ಸಂಪುಟದಿಂದ ಸಚಿವರನ್ನು ವಜಾ ಮಾಡಲು ಆಗ್ರಹಿಸಿ ತಹಸೀಲ್ ಕಾರ್ಯಾಲಯದ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.
ಬಿಜೆಪಿ ತಾಲೂಕಾಧ್ಯಕ್ಷ ಸುಧೀರ ಕಾಡಾದಿ ಮಾತನಾಡಿ, ಹಿಂದೂ ಭಯೋತ್ಪಾದನೆ ಬಗ್ಗೆ ಗೃಹ ಸಚಿವ ಶಿಂಧೆ ಅವರ ಹೇಳಿಕೆ ಶೋಭೆ ತರುವಂಥದ್ದಲ್ಲ. ಮೂಲ ಭಯೋತ್ಪಾದಕರನ್ನು ಬೆಂಬಲಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿ ಬಗ್ಗೆ ತೀರಾ ಹಗುರವಾಗಿ ಮಾತನಾಡಿರುವುದು ಸಲ್ಲದು ಎಂದರು.
ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ರವಿ ಚಂದನಕೇರೆ ಮಾತನಾಡಿ, ಸಚಿವ ಸುಶೀಲ್ ಕುಮಾರ ಶಿಂಧೆ ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ನೀಡಿರುವ ಹೇಳಿಕೆಯಿಂದ ಅವರಲ್ಲಿನ ಬುದ್ಧಿಮಾಂಧ್ಯತೆ ಪ್ರದರ್ಶಿಸುತ್ತದೆ. ಶಿಂಧೆ ಕೂಡಲೇ ಕ್ಷಮೆಯಾಚಿಸಲು ಆಗ್ರಹಿಸಿ, ಸಂಪುಟದಿಂದ ಅವರನ್ನು ವಜಾಗೊಳಿಸಲು ಒತ್ತಾಯಿಸಿದರು.
ಇದೇ ವೇಳೆ ಶಿವಾನಂದ ಕಲ್ಲೂರ್ ಮಾತನಾಡಿ, ಶಿಂಧೆ ಹಿಂದೂ ಸಮುದಾಯದ ಭಾವನೆಗಳಿಗೆ ಅವಮಾನಿಸಿದ್ದಾರೆ. ಅದಲ್ಲದೇ ನಿಜವಾದ ಭಯೋತ್ಪಾದಕರನ್ನು ಬೆನ್ನು ತಟ್ಟುವ ಪ್ರಶಂಸನೀಯ ಮಾತು ಅವರದ್ದಾಗಿದೆ ಎಂದು ಆರೋಪಿಸಿದರು.
ಪ್ರತಿಭಟನಾ ಸಂದರ್ಭದಲ್ಲಿ ದೀಪಕ ಗಾಯಕವಾಡ್, ರಾಜಣ್ಣ ಶಿರಗಾಪುರ, ಭಾರ್ಗವ ಚಾರಿ, ಶಿವಕುಮಾರ ಖರೋನೆ, ಪ್ರಕಾಶ ಮಹಾಲಿಂಗ, ನೀಲೇಶ ಸುರ್ಯವಂಶಿ, ಸಂಗಮೇಶ ಖಂಡಾಳೆ, ಅಭಿಜಿತ ಶಿಂಧೆ, ವಿನೋದ ಚಿರಡೆ, ನಾಗೇಶ ಸಾಯಬಣ್ಣೆ ಸೇರಿದಂತೆ ಕಾರ್ಯಕರ್ತರು, ಪದಾಧಿಕಾರಿಗಳು ಇದ್ದರು. ನಂತರ ತಹಸೀಲ್ದಾರ್ಗೆ ಮನವಿ ಪತ್ರ ಸಲ್ಲಿಸಿದರು.