ಸಮಾನತೆಗಾಗಿ ಮಹಿಳಾ ಕಾನೂನು ಜಾರಿ

Updated on: 

ಬೀದರ್: ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆಗಳಂತಹ ಪಿಡುಗು ತಡೆಗಟ್ಟುವ ಹಿನ್ನೆಲೆಯಲ್ಲಿ ಮಹಿಳೆಯರ ಹಿತರಕ್ಷಣಾ ಕಾನೂನು ಕಾಯ್ದೆ ಜಾರಿಗೆ ಬಂದಿದೆ ಎಂದು ಜಿಲ್ಲಾ ನ್ಯಾಯಾಧೀಶ ಸಿ. ಆರ್. ರಾಜ ಸೋಮಶೇಖರ್ ತಿಳಿಸಿದರು.
 ಅವರು ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಶಾಸನ ಕುರಿತ ಕಾರ್ಯಾಗಾರ ಉದ್ಘಾಟಿಸಿ, ಸಮಾಜದಲ್ಲಿ ಮಹಿಳೆ ಪುರುಷರಿಗೆ ಸಮಾನತೆ ತರಲು ಬಲಿಷ್ಠವಾದ ಕಾನೂನು ಜಾರಿಯಲ್ಲಿದೆ. ಮಹಿಳೆಯರಿಗೆ ಮೊದಲು ಸ್ವಾತಂತ್ರ್ಯ ಇರಲಿಲ್ಲ. ಆದರೆ ಕಾಲ ಕ್ರಮೇಣ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಅಪರಾಧ: ಮಗು ತನ್ನ ಕನಸು ಕಾಣುವ ಮುನ್ನವೇ, ಅದರ ಹತ್ಯೆ ಮಾಡುವುದು ಕಾನೂನು ದೃಷ್ಟಿಯಿಂದ ದೊಡ್ಡ ಅಪರಾಧ. ಅದಕ್ಕೆ ಜೈಲು ಶಿಕ್ಷೆ ವಿಧಿಸಲಾಗುವುದು. ಭ್ರೂಣಲಿಂಗ ಪತ್ತೆ ಹಚ್ಚಿದರಿಗೆ ಹಾಗೂ ಅದಕ್ಕೆ ಪ್ರಚೋದನೆ ನೀಡಿದವರಿಗೆ ಶಿಕ್ಷೆಗಳಿವೆ ಎಂದು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು. ಹೆಣ್ಣು ಕೀಳೆಂಬ ಭಾವನೆ ಪರಿವರ್ತನೆಯಾಗಬೇಕು. ಮಾನವಿಯ ಮೌಲ್ಯಗಳು ಕುಸಿಯುತ್ತಿದ್ದು, ಶೋಷಣೆ ವಿರುದ್ಧ ಕಾನೂನು ಹೋರಾಟ ಅಗತ್ಯವಾಗಿದೆ. ಕೌಟುಂಬಿಕ ಸಮಸ್ಯೆ, ವರದಕ್ಷಿಣೆ ಪಿಡುಗು, ಮಹಿಳೆಯರ  ಮೇಲಾಗುತ್ತಿರುವ ದೌರ್ಜನ್ಯಗಳನ್ನು ಜಿಲ್ಲಾ ಕಾನೂನು ಪ್ರಾಧಿಕಾರದಲ್ಲಿ ಲಿಖಿತ ಮೂಲಕ ತಿಳಿಸಿ, ಸಮಸ್ಯೆ ಪರಿ ಹರಿಸಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.
 ಮುಖ್ಯ ಅತಿಥಿಯಾಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ಸುನೀಲ ತಪ್ಸೆ ಮಾತನಾಡಿ, ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ದುಃಖಕರ ಸಂಗತಿ. ಈ ಕುರಿತು ಜನರಲ್ಲಿ ಜಾಗೃತಿ ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ ಎಂದರು.
ಅನುಪಾತ ತಾರತಮ್ಯ: ಮಕ್ಕಳ ತಜ್ಞ ಡಾ. ಸಿ. ಆನಂದರಾವ್ ಮಾತನಾಡಿ, ಭ್ರೂಣಲಿಂಗ ಹತ್ಯೆಗೆ ಕಾನೂನು ಶಿಕ್ಷೆ ಇದ್ದರೂ, ಇದು  ಸರಿಯಾದ ರೀತಿಯಲ್ಲಿ ಪರಿಪಾಲನೆ ಆಗುತ್ತಿಲ್ಲ. ಲಿಂಗಪತ್ತೆ ಹಚ್ಚಲು ವೈದ್ಯರಲ್ಲಿ ನೈತಿಕತೆ ಅಗತ್ಯವಿದೆ ಎಂದರು.  
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅನೀಲ ಚಿಂತಾಮಣಿ ಮಾತನಾಡಿ, 2010ರಲ್ಲಿ ಮಹಿಳೆ-ಪುರುಷರ ಅನುಪಾತ ಸಾವಿರಕ್ಕೆ 927 ಮಹಿಳೆಯರು ಹಾಗೂ 2011ರಲ್ಲಿ 914ಕ್ಕೆ ಕುಸಿದಿದೆ. ಇದನ್ನು ಗಮನಿಸಿದರೆ ಪ್ರತಿ ಹತ್ತು ವರ್ಷಕ್ಕೆ ಆಗುವ ಜನಗಣತಿಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.
ನಕಲಿ ವೈದ್ಯರಿಗೆ ಶಿಕ್ಷೆ: ಅತಿಥಿ ಉಪನ್ಯಾಸ ನೀಡಿದ ನ್ಯಾಯವಾದಿ ಮಂಗಲಾ ದಾಡಗೆ ಅವರು ಗರ್ಭಪಾತ ಮಾಡುವ ನಕಲಿ ವ್ಶೆದ್ಯರಿದ್ದಾರೆ. ಇವರಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಬೇಕಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಡಾ. ಉಮಾ ದೇಶಮುಖ ಮಾತನಾಡಿ, ಗರ್ಭ ಧರಿಸಿದ 2-3 ತಿಂಗಳಲ್ಲಿಯೇ ಗರ್ಭಪಾತ ಆಗುವ ಮಾತ್ರೆಗಳನ್ನು ಮೆಡಿಕಲ್ ಸ್ಟೋರ್‌ಗಳಲ್ಲಿ ಇಡಬಾರದು. ಆರೋಗ್ಯ ಇಲಾಖೆ ಕ್ರಮ ಜರುಗಿಸುವುದು ಅಗತ್ಯವಾಗಿದೆ. ಲಿಂಗ ಪತ್ತೆ ಹಚ್ಚುವ ಕೇಂದ್ರಗಳ ನೋಂದಣಿ ಪರಿಶೀಲಿಸುವುದರ ಜೊತೆ ಲಿಂಗ ಪತ್ತೆ ಹಚ್ಚುವ ಸ್ಕ್ಯಾನಿಂಗ್ ಕೇಂದ್ರಗಳ ಪತ್ತೆ ಹಚ್ಚುವುದು ಅಗತ್ಯ ಎಂದರು.
 ಡಾ. ಶರಣಯ್ಯಾ ಸ್ವಾಮಿ, ಡಾ. ಶಿವಶಂಕರ ಭತಮೂರ್ಗೆ, ಡಾ. ಸಿಂಗೋಡೆ ಸೇರಿದಂತೆ ವೈದ್ಯಾಧಿಕಾರಿಗಳು,  ಶಿಬಿರಾರ್ಥಿಗಳು ಭಾಗವಹಿಸಿದ್ದರು. ಡಾ. ವೀರೇಂದ್ರ ಡೋಣಿ ಸ್ವಾಗತಿಸಿ, ಸುಭಾಸ ಮುಧಾಳೆ ಪ್ರಸ್ತಾವಿಕ ಮಾತನಾಡಿ, ಕಾರ್ಯಕ್ರಮದ ಉದ್ದೇಶ ವಿವರಿಸಿದರು. ವಾಮನರಾವ್ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com