ಬೀದರ್: ಬೀದರ್ ದಕ್ಷಿಣ ಕ್ಷೇತ್ರದ ಕರ್ನಾಟಕ ಜನತಾ ಪಕ್ಷದ(ಕೆಜೆಪಿ) ಅಭ್ಯರ್ಥಿ ಡಾ. ಶೈಲೇಂದ್ರ ಬೆಲ್ದಾಳೆ ಅವರಿಗೆ ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ಜನ ಆಶೀರ್ವಾದ ಮಾಡಬೇಕೆಂದು ಕೆಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಸುಭಾಷ ಕಲ್ಲೂರ್ ಕರೆ ನೀಡಿದರು.
ಬೀದರ್ ದಕ್ಷಿಣ ಕ್ಷೇತ್ರದ ಮುತ್ತಂಗಿ ಗ್ರಾಮದಲ್ಲಿ ನಡೆದ ಪಾದಯಾತ್ರೆಯ ಸಂದರ್ಭ ಮಾತನಾಡಿ, ಮಾಜಿ ಸಿಎಂ ಯಡಿಯೂರಪ್ಪ ಅವರು ಕಲ್ಯಾಣ ಕರ್ನಾಟಕದ ಕನಸು ಇಟ್ಟುಕೊಂಡು ಹೊಸ ಪಕ್ಷ ರಚನೆ ಮಾಡಿದ್ದಾರೆ. ಬರುವ ಚುನಾವಣೆಯಲ್ಲಿ ಕೆಜೆಪಿಗೆ ಪೂರ್ಣ ಪ್ರಮಾಣದಲ್ಲಿ ಬಹುಮತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ದಕ್ಷಿಣ ಕ್ಷೇತ್ರದ ಯುವ ನಾಯಕ ಬೆಲ್ದಾಳೆಗೆ ಎಲ್ಲ ಸಮುದಾಯದ ಜನ ಬೆಂಬಲಿಸಿ ಗೆಲ್ಲಿಸಬೇಕು ಎಂದರು.
ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಕ್ಷೇತ್ರದ ಸೇವೆ ಮಾಡಲು ಬರುವ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆ ಮಾಡಿ ಎಂದು ಕೋರಿದರು. ಮುತ್ತಂಗಿ, ಮದರಗಿ, ಗುಡಿತಾಂಡಾ, ಗೋವಿಂದ ತಾಂಡಾ ಸೇರಿದಂತೆ ಇತರೆ ಗ್ರಾಮಗಳಲ್ಲಿ ಪಾದಯಾತ್ರೆ ಮೂಲಕ ಮನೆ, ಮನೆಗೆ ತೆರಳಿ ಭರ್ಜರಿ ಪ್ರಚಾರ ಮಾಡಿದರು. ಓಂಕಾರ ಮಲ್ಲಿಗೆ, ರಾಚಪ್ಪ ಮಾಸ್ಟರ್, ಶ್ರೀನಿವಾಸ, ವೀರು ಮಜಗೆ, ಜಗನ್ನಾಥ ರೆಡ್ಡಿ ಹಾಗೂ ಹಣಮಂತ ಪಾಟೀಲ್ ಸೇರಿದಂತೆ ಇತರರಿದ್ದರು.