ಖಾಲಿ ಹುದ್ದೆಗಳ ಮಧ್ಯೆಯೂ ಅತ್ಯುತ್ತಮ ಸಾಧನೆ

Updated on: 

ಬೀದರ್: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬಹುಸಂಖ್ಯೆಯಲ್ಲಿ ಹುದ್ದೆಗಳು ಖಾಲಿಯಿರುವ ಮಧ್ಯೆಯೂ ಡಾ. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಯಿಂದ ಶೇ.60ರಷ್ಟು ವಿಶೇಷ ಬಜೆಟ್ ವಿನಿಯೋಗಿಸುವಲ್ಲಿ ಯಶಸ್ವಿ ಕಂಡಿದ್ದೇವೆ ಎಂದು ಸಮಿತಿಯ ಅಧ್ಯಕ್ಷ ತ್ರಿವಿಕ್ರಮ್ ಜೋಷಿ ತಿಳಿಸಿದರು.
  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ವಿವಿಧ ಇಲಾಖೆಗಳ ಪರಿಶೀಲನೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಡಾ. ನಂಜುಂಡಪ್ಪ ಅವರ ವರದಿಯಂತೆ ರಾಜ್ಯದ 114 ತಾಲೂಕುಗಳ ಅಭಿವೃದ್ಧಿಗೆ ರಾಜ್ಯ ಬಿಜೆಪಿ ಸರ್ಕಾರ ಸಾವಿರಾರು ಕೋಟಿ ಅನುದಾನ ಒದಗಿಸಿಕೊಟ್ಟಿದೆ ಎಂದರು.
  ಕಳೆದ 2007- 08ರಲ್ಲಿ ಯೋಜನೆ ಆರಂಭವಾಗಿದ್ದು ಒಟ್ಟು 8 ವರ್ಷಗಳ ಅವಧಿಗಾಗಿ ಒಟ್ಟಾರೆ 31 ಸಾವಿರ ಕೋಟಿ ಯೋಜಿತ ಬಜೆಟ್ ಇದ್ದು ಈ ಪೈಕಿ 16 ಸಾವಿರ ಕೋಟಿ ವಿಶೇಷ ಅಭಿವೃದ್ಧಿಗಾಗಿ. ಈಗಾಗಲೇ 5 ವರ್ಷಗಳ ಕಾಲ ಮುಗಿದಿದ್ದು ಇಲ್ಲಿಯವರೆಗೆ 10,421 ಕೋಟಿಯನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಖರ್ಚು ಮಾಡಲಾಗಿದೆ ಎಂದು ವಿವರಿಸಿದರು.
ಈಗಾಗಲೇ ಶೇ.60 ಗುರಿ ಸಾಧನೆ: ಪ್ರಸಕ್ತ ಸಾಲಿನಲ್ಲಿ ಈವರೆಗೆ ಶೇ.60ರಷ್ಟು ಗುರಿ ಸಾಧಿಸಲಾಗಿದ್ದು ಬರುವ ಮಾರ್ಚ್ ಅಂತ್ಯದ ಒಳಗಾಗಿ ಶೇ.85ರಷ್ಟು ಸಾಧನೆಯತ್ತ ಸಾಗುವ ಎಲ್ಲ ಭರವಸೆಗಳಿವೆ ಎಂದ ಅವರು, ಅನುದಾನ ಖರ್ಚಾಗದಿದ್ದರೂ ಇಲ್ಲಿ ಹಣ ವಾಪಸ್ ಆಗುವ ಯಾವುದೇ ಆತಂಕ ಇಲ್ಲ ಎಂದರು.
  2012- 13ನೇ ಸಾಲಿನಲ್ಲಿ 2,680 ಕೋಟಿಯನ್ನು ವಿಶೇಷ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಅನುದಾನ ನೀಡಲಾಗಿತ್ತು. ಈ ಭಾಗಕ್ಕೆ ಸಂಬಂಧಿಸಿದಂತೆ 20 ಇಲಾಖೆಗಳ ಮೂಲಕ ಈಗಾಗಲೇ 1,603 ಕೋಟಿ ಖರ್ಚು ಮಾಡಲಾಗಿದೆ. ಡಾ. ನಂಜುಂಡಪ್ಪ ವರದಿ ಅನುಷ್ಠಾನಕ್ಕಾಗಿ ಮುಂದಿನ ಸಾಲಿಗಾಗಿ 2,900 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸುವಂತೆ ಕೋರಲಾಗಿದೆ ಎಂದರು.
ವಿವಿಧ ಯೋಜನೆ: ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ನಂಜುಂಡಪ್ಪ ಅನುಷ್ಠಾನ ಸಮಿತಿ ಯೋಜನೆಯಡಿ ನಿರಂತರ ಜ್ಯೋತಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಶಾಲಾ ಮಕ್ಕಳಿಗಾಗಿ ಕುಡಿವ ನೀರಿನ, ಶೌಚಾಲಯಗಳಂಥ ಪಂಚ ಸೌಲಭ್ಯ, ಅಸಹಾಯಕರಿಗೆ ಮನೆ, ಸುವರ್ಣ ಆರೋಗ್ಯ ಸುರಕ್ಷಾ, ಭಾಗ್ಯಲಕ್ಷ್ಮಿ, ಅಂಗನವಾಡಿ ಕಟ್ಟಡ ಮುಂತಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆಂದು ತಿಳಿಸಿದರು.
  ಈ ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಪ್ರತಿಯೊಂದು ಕಾಮಗಾರಿಯ ಅನುದಾನ, ಖರ್ಚಾದ ಮೊತ್ತ ವರ್ಷ ಇತ್ಯಾದಿ ವಿವರಗಳುಳ್ಳ ಫಲಕ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅಧ್ಯಕ್ಷ ತ್ರಿವಿಕ್ರಮ್ ಜೋಷಿ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com