ಜಾತಿ ಲೆಕ್ಕಾಚಾರದ ಗುಂಗಿನಲ್ಲಿ ರಾಜಕೀಯ

Updated on

ಕನ್ನಡಪ್ರಭ ವಾರ್ತೆ  ಬೀದರ್  ಏ. 4
ಲೋಕಸಭಾ ಚುನಾವಣಾ ಅಖಾಡಾ ಸಿದ್ಧವಾಗಿದೆ. ಮತದಾನದ ದಿನಗಳು ಸಮೀಪಿಸುತ್ತಿವೆ. ಧಗೆ ಬಿಸಿಲಿನ ಮಧ್ಯ ಅಭ್ಯರ್ಥಿಗಳ ಪ್ರಚಾರದ ಭರಾಟೆ ಜೋರು ಹಿಡಿದಿದ್ದರೂ ಆ ಜಾತಿಗೆ ಇಷ್ಟು, ಈ ಜಾತಿಗಿಷ್ಟು ಎಂಬ ಮತ ಮಾತುಗಳು ಹರಟೆ ಕಟ್ಟೆಯಲ್ಲಿ ಹರಿದಾಡುತ್ತಿವೆ. ಕುತೂಹಲ ಎಲ್ಲರಲ್ಲೂ ಇದೆ.
ಆಯಾ ಪಕ್ಷಗಳ ಅಭ್ಯರ್ಥಿ ಆಯ್ಕೆಗೂ ಮುನ್ನ ಕಾವು ಕಂಡಿದ್ದ ಜಾತಿ ಲೆಕ್ಕಾಚಾರದ ಮಾತುಗಳೀಗ ಪ್ರಚಾರದ ಪ್ರಖರತೆಯೊಂದಿಗೆ ಮತ ಯಾಚನೆಯ ವೈಖರಿಯ ಪ್ರಮುಖ ದಾಳವಾಗುತ್ತ ಸಾಗಿದ್ದಲ್ಲದೆ ಯಾರ ಮತ  ಯಾರು ಕಬಳಿಸ್ತಾರೆ ಎಂಬುವದು ಹರಟೆಯಲ್ಲಿ ಪ್ರಮುಖ ಸ್ಥಾನ ವಹಿಸಿದೆ.
24 ಅಭ್ಯರ್ಥಿಗಳು: ಸದ್ಯ ಅಖಾಡಾದಲ್ಲಿ ಹಾಲಿ ಸಂಸದ ಮಾಜಿ ಸಿಎಂ ಧರಂಸಿಂಗ್ ಮತ್ತೊಮ್ಮೆ ಆಯ್ಕೆ ಬಯಸಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದಾರೆ. ಚುನಾವಣಾ ಅಖಾಡಾದಲ್ಲಿ ಹೊಸ ಮುಖದೊಂದಿಗೆ ಕಣದಲ್ಲಿದ್ದಾರೆ. ಬಿಜೆಪಿಯ ಭಗವಂತ ಖೂಬಾ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಜೆಡಿಎಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಇದಲ್ಲದೆ ಬಿಎಸ್‌ಪಿಯಿಂದ ಶಂಕರ ಭಯ್ಯಾ ಮತ್ತು ಆಮ್ ಆದ್ಮಿ ಪಕ್ಷದಿಂದ ಚಂದ್ರಕಾಂತ ಕುಲಕರ್ಣಿ ಸೇರಿದಂತೆ ಒಟ್ಟು 24 ಅಭ್ಯರ್ಥಿಗಳು ಚುನಾವಣಾ ಅಖಾಡಾದಲ್ಲಿದ್ದಾರೆ.
ಇಲ್ಲಿ ಕಾಂಗ್ರೆಸ್‌ನ ಧರಂಸಿಂಗ್ ರಜಪೂತ ಸಮಾಜದವರಾಗಿದ್ದರೆ, ಬಿಜೆಪಿಯ ಭಗವಂತ ಖೂಬಾ ಲಿಂಗಾಯತ, ಜೆಡಿಎಸ್‌ನ ಬಂಡೆಪ್ಪ ಖಾಶೆಂಪುರ ಕುರುಬ ಸಮುದಾಯ, ಬಿಎಸ್‌ಪಿಯ ಶಂಕರ ಭಯ್ಯಾ ಎಸ್‌ಸಿ ಮತ್ತು ಆಮ್ ಆದ್ಮಿ ಪಕ್ಷದ ಚಂದ್ರಕಾಂತ ಕುಲಕರ್ಣಿ ಬ್ರಾಹ್ಮಣ ಸಮಾಜದವರಾಗಿದ್ದಾರೆ.
ಹೀಗೆಯೇ ಈ ಪ್ರಮುಖ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪಕ್ಷಗಳ ಅಭ್ಯರ್ಥಿಗಳಲ್ಲದೆ ಇತರೆ ಪಕ್ಷಗಳು ಮತ್ತು ಪಕ್ಷೇತರರ ಅಭ್ಯರ್ಥಿಗಳ ಜಾತಿವಾರು ಲೆಕ್ಕಾಚಾರ ಮತ್ತು ಆಯಾ ಜಾತಿಗಳ ಮತಗಳ ವಿಂಗಡಣೆಯ ಮಾತುಗಳು ಕಳೆದ ಚುನಾವಣೆಯಂತೆ ಈ ಬಾರಿಯೂ ಪ್ರಾಮುಖ್ಯತೆ ಪಡೆದಿವೆ.
ಜಾತಿ ಲೆಕ್ಕಾಚಾರ: ಅಭ್ಯರ್ಥಿ ಆಧಾರಿತ ಜಾತಿವಾರು ಮತಗಳ ವಿಂಗಡಣೆ ಅಸಹಜ, ಅವೈಜ್ಞಾನಿಕ. ಈ ವಿಷಯ ಸ್ಪಷ್ಟವಾಗಿದ್ದರೂ, ಚುನಾವಣಾ ಅಖಾಡ ಎಂದಾಕ್ಷಣ ಜಾತಿ ಲೆಕ್ಕಾಚಾರದ ಜೋರು ಎಲ್ಲೆಡೆಯಂತೆ ಇಲ್ಲೂ ಸಾಮಾನ್ಯವಾಗಿದೆ. ಅದರಲ್ಲೂ ಈ ಕ್ಷೇತ್ರದಲ್ಲಿ ಜಾತಿ ಮತಗಳ ವಿಂಗಡಣೆ ಅಭ್ಯರ್ಥಿಗಳು ಪಡೆಯುವ ಮತಗಳ ಪಾಲಿನ ಪ್ರಾಬಲ್ಯವನ್ನು ನಿರ್ಧರಿಸುತ್ತವೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ.
ಲೋಕಸಭಾ ಕ್ಷೇತ್ರದಲ್ಲಿ ಜಾತಿವಾರು ಲೆಕ್ಕಾಚಾರ ನೋಡಿದರೆ 2001ರ ಜನಗಣತಿ ಪ್ರಕಾರ ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹೆಚ್ಚು ನಂತರ ಮುಸ್ಲಿಂ ಸಮುದಾಯದವರು ತದನಂತರ ಲಿಂಗಾಯತರ ಸಂಖ್ಯೆ ಹೆಚ್ಚು. ಏ. 17ರಂದು ನಡೆಯಲಿರುವ ಚುನಾವಣೆಗೆ ಮುನ್ನ ಪ್ರಕಟಿಸಲಾಗಿರುವ ಮತದಾರರ ಪಟ್ಟಿಯಲ್ಲಿ ಸುಮಾರು 16 ಲಕ್ಷ ಹೆಸರುಗಳಿವೆ. ಒಂದು ಅಂದಾಜಿನ ಪ್ರಕಾರ ಇಲ್ಲಿ ಸುಮಾರು 2.2 ಲಕ್ಷ ಲಿಂಗಾಯತ ಸಮುದಾಯಕ್ಕೆ ಸೇರಿದ ಮತದಾರರಿದ್ದರೆ, 3.2ಲಕ್ಷ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪಂಗಡದ 4.2ಲಕ್ಷ ಮತದಾರರು, ಮರಾಠಾ ಸಮುದಾಯಕ್ಕೆ ಸೇರಿದ 1.2ಲಕ್ಷ ಮತದಾರರಿದ್ದಾರೆ. ಇವರನ್ನು ಹೊರತುಪಡಿಸಿದರೆ ಇನ್ನುಳಿದಂತೆ ಬ್ರಾಹ್ಮಣ, ಸಿಖ್, ಜೈನ್ ಅಲ್ಲದೆ ಇತರೆ ಹಿಂದುಳಿದ ವರ್ಗಗಳ ಸುಮಾರು 5 ಲಕ್ಷಕ್ಕೂ ಹೆಚ್ಚು ಮತದಾರರನ್ನು ಜಿಲ್ಲೆ ಹೊಂದಿದೆ.
ಗೆಲವಿನ ಓಟ: ಇತ್ತ ಚುನಾವಣಾ ಅಖಾಡಾದ ಹರಟೆ ಕಟ್ಟೆಯಲ್ಲಂತೂ ಲಿಂಗಾಯತ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ ಮತಗಳ ಲೆಕ್ಕಾಚಾರವೇ ಜೋರಾಗಿ ನಡೆದಿದೆ. ಈ ಮತಗಳ ವಿಭಜನೆ ಯಾವ ರೀತಿಯಲ್ಲಿ ಆಗುತ್ತದೆಯೋ ಆ ಲೆಕ್ಕಾಚಾರದಲ್ಲಿ ಅಭ್ಯರ್ಥಿಯ ಗೆಲವಿನ ಓಟ ನಿರ್ಧಾರವಾಗುತ್ತದೆ ಎಂದೆನ್ನಲಾಗುತ್ತಿದೆ.
ಈ ಎಲ್ಲ ಲೆಕ್ಕಾಚಾರದ ಹಿಂದೆ ಬಿದ್ದಿರುವ ಆಯಾ ಪಕ್ಷಗಳ ಅಭ್ಯರ್ಥಿಗಳು ಮಠ ಮಂದಿರ ಮಸೀದಿ, ಚರ್ಚ್‌ಗಳ ಬಾಗಿಲು ತುಳಿಯುತ್ತ ಸಾಗಿದ್ದರೆ, ಅವರ ಬೆಂಬಲಿಗರು ಮತ ಗಳಿಕೆ ಲೆಕ್ಕಾಚಾರವನ್ನೂ ಅಲ್ಲಿಯೇ ಮೆಲಕು ಹಾಕುತ್ತಿರುವುದು ವಿಶೇಷ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com