ಯಾದಗಿರಿ: ಶಹಾಪುರ ತಾಲೂಕಿನ ಕಾಲುವೆ ಕೊನೆಭಾಗದ ಗ್ರಾಮಗಳಾದ ವಡಗೇರಾ, ಉಳ್ಳೆಸುಗೂರ, ಕುರುಕುಂದಾ, ಕಾಡಂಗೇರಾ, ತೇಕರಾಳ ಇನ್ನೂ ಮುಂತಾದ ಗ್ರಾಮಗಳ ನೂರಾರು ರೈತರು ವಡಗೇರಾ ಕೆಬಿಜೆಎನ್ನೆಲ್ ಅಧಿಕಾರಿಗಳ ವಾಹನಕ್ಕೆ ಘೇರಾವ್ ಹಾಕಿ ಪ್ರತಿಭಟಿಸಿದರು.
ಈಗಾಗಲೇ ಕಾಲುವೆಗೆ ನೀರು ಹರಿಸಲು ಕೆಬಿಜೆಎನ್ನೆಲ್ ಸಜ್ಜಾಗಿದೆ. ಉಪಕಾಲುವೆಗಳು ಜಾಲಿಗಿಡಗಳಿಂದ, ಹೂಳಿನಿಂದ ಆವೃತವಾಗಿದ್ದು, ಸಂಪೂರ್ಣ ಹಾಳಾಗಿವೆ. ಆದರೂ ದುರಸ್ತಿ ಕಾಮಗಾರಿ ಕೈಗೊಂಡಿಲ್ಲ ಎಂದು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರು ಕಂಗೆಟ್ಟಿದ್ದಾರೆ. ಕಾಲುವೆಗಳ ನೀರು ಸದ್ಬಳಕೆ ಮಾಡಿಕೊಳ್ಳಬೇಕೆಂದರೆ ಉಪಕಾಲುವೆಗಳು ಸಂಪೂರ್ಣ ಹಾಳಾಗಿವೆ. ಈಗಾಗಲೇ ಸರ್ಕಾರ 500 ಕೋಟಿ ಖರ್ಚು ಮಾಡಿ ಕಾಲುವೆ ನವೀಕರಣಗೊಳಿಸಲಾಗಿದೆ. ಕಾಲುವೆಗೆ ಸರಾಗವಾಗಿ ನೀರು ಹರಿಯುವ ಭರವಸೆಯನ್ನು ರೈತರು ಹೊಂದಿದ್ದಾರೆ. ಆದರೆ ಉಪ ಕಾಲುವೆಗಳ ದುರಸ್ತಿ ಮಾಡದ ಕಾರಣ ನೀರು ಪೋಲಾಗುವ ಸಾಧ್ಯತೆಯಿದೆ ಎಂದು ಕಿಡಿಕಾರಿದರು.
ಅಧಿಕಾರಿಗಳಿಗೆ ತರಾಟೆ: ಬಿಡಿ 21ರ ಕುರುಕುಂದ 5 ಕಿಮೀ ಕಾಲುವೆ ಮತ್ತು ರಸ್ತೆ, ಡಿ21ರ ವ್ಯಾಪ್ತಿಯ ತೇಕರಾಳ, ಉಳ್ಳೆಸುಗೂರ, ವಡಗೇರಾ, ಕಂದಳ್ಳಿ, ಹಾಲಗೇರಾ ಇನ್ನೂ ಅನೇಕ ಕಾಲುವೆ ಕೊನೆಭಾಗದ ಉಪ ಕಾಲುವೆಗಳು ಜಾಲಿಗಿಡಗಳಿಂದ ಆವೃತಗೊಂಡಿವೆ. ಕಾಲುವೆಗಳಲ್ಲಿ ಮಣ್ಣು ಹೂಳು ತುಂಬಿ ಹಾಳಾಗಿವೆ ಎಂದು ರೈತರಾದ ಶರಣಬಸಪ್ಪ ಬಿರಾದಾರ್, ಗುರಣ್ಣಗೌಡ ವನಸಾನಿ, ಮರಿಲಿಂಗಪ್ಪ, ಜೈರೆಡ್ಡಿ ಸೇರಿದಂತೆ ರೈತರು ಕೆಬಿಜೆಎನ್ನೆಲ್ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
--
Advertisement