ಬೀದರ್: ಬ್ಯಾಂಕ್ ಹಾಗೂ ಕಾರ್ಖಾನೆಯಲ್ಲಿ ಅವ್ಯವಹಾರ ಎಸಗಿದವರಿಗೆ ತಕ್ಕ ಶಿಕ್ಷೆಯಾಗಬೇಕು. ರೈತರಿಗೆ ನ್ಯಾಯ ಸಿಗಬೇಕೆನ್ನುವುದು ನನ್ನ ಉದ್ದೇಶವಾಗಿದ್ದು, ಇದರಲ್ಲಿ ವೈಯಕ್ತಿಕ ದ್ವೇಷ ಇಲ್ಲ ಎಂದು ಔರಾದ್ ಶಾಸಕ ಪ್ರಭು ಚವ್ಹಾಣ ಸ್ಪಷ್ಟಪಡಿಸಿದರು.
ನಗರದಲ್ಲಿ ಭಾನುವಾರ ಸಂಸದ ಭಗವಂತ ಖೂಬಾ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಗಂದಗೆ ಏರ್ಪಡಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭೆಯಲ್ಲಿ ಈ ಕುರಿತು ಕೇಳಿದ ಪ್ರಶ್ನೆಗಳಿಗೆ ಸರ್ಕಾರ ನೀಡಿದ ಉತ್ತರ ಕೆಲವು ಸರಿಯಾಗಿದ್ದರೆ ಕೆಲವು ಸರಿಯಾಗಿಲ್ಲ. ಇದರಿಂದ ನನಗೆ ಅಸಮಾಧಾನವಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಡಿಸಿಸಿ ಬ್ಯಾಂಕ್ ಹಾಗೂ ಎನ್‌ಎಸ್‌ಎಸ್‌ಕೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಇದರಿಂದ ರೈತರಿಗೆ ಅನ್ಯಾಯವಾಗಿದೆ. ಕಳೆದ 2-3 ವರ್ಷಗಳಿಂದ ವಿಸ್ತಾರವಾಗಿ ಅಭ್ಯಸಿಸಿ ಈಗ ಅದನ್ನು ಕೈಗೆ ತೆಗೆದುಕೊಂಡಿದ್ದೇನೆ. ರೈತರಿಗೆ ನ್ಯಾಯ ಸಿಗುವವರೆಗೆ ಅದನ್ನು ಕೈ ಬಿಡುವುದಿಲ್ಲ ಎಂದರು.
ರಾಜ್ಯದ ಕಿವುಡ, ಕುರುಡ ಕಾಂಗ್ರೆಸ್ ಸರ್ಕಾರ ಇಂತಹ ಅವ್ಯವಹಾರ ಗಣನೆಗೆ ತೆಗೆದುಕೊಳ್ಳದಿರುವುದರಿಂದ ಹಾಗೂ ಸರ್ಕಾರದ ಉತ್ತರದಿಂದ ಸಂತುಷ್ಟನಾಗದೇ ಲೋಕಾಯುಕ್ತ ತನಿಖೆಯಾಗಬೇಕೆಂದು ಆಗ್ರಹಿಸಿದರು.
Advertisement