ಕ.ಪ್ರ. ವಾರ್ತೆ ್ಣ ಔರಾದ್ ್ಣ ಆ.3
ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಸುಖನಿದ್ರೆಗೆ ಶರಣಾಗಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಾಥರಾವ್ ಮಲ್ಕಾಪೂರೆ ಕಿಡಿ ಕಾರಿದರು.
ತಾಲೂಕಿನ ಕಮಲನಗರದ ಡಾ. ಚನ್ನಬಸವಪಟ್ಟದೇವರು ಸ್ಮಾರಕ ಭವನದಲ್ಲಿ ಭಾನುವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಮಾತನಾಡಿ, ಬಿಜೆಪಿ ದೇಶದ ಹಿತಕ್ಕಾಗಿ ರಾಜಕಾರಣ ಮಾಡುತ್ತದೆ ವಿನಃ ನಮಗೆ ಅಧಿಕಾರದ ಆಸೆಯಿಲ್ಲ. ಅಧಿಕಾರ ನಮಗೆ ಅಸ್ತ್ರವಿದ್ದಂತೆ, ಆದರೆ ಉಡುಗೊರೆಯಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಬದಲು ನಿದ್ರಾಮಯ್ಯ: ಬಿಜೆಪಿ ಒಳಜಗಳದಿಂದ ಇಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಅವರ ಮೇಲೆ ರಾಜ್ಯದ ಜನತೆ ಅನೇಕ ನೀರಿಕ್ಷೆ ಇಟ್ಟಿಕೊಂಡಿತ್ತು. ಆದರೆ ಜನರ ನೀರಿಕ್ಷೆಗಳಿಗೆ ತಣ್ಣೀರೆರಚಿ ನಿದ್ರೆಗೆ ಶರಣಾಗಿದ್ದಾರೆ. ಮುಖ್ಯಮಂತ್ರಿಗಳು ನಿದ್ರೆ ಮಾಡುವುದರಲ್ಲಿ ನಿಸ್ಸೀಮರಾಗಿದ್ದು ಅವರನ್ನು 'ನಿದ್ರಾಮಯ್ಯ' ಎಂದು ಕರೆಯುವುದು ಒಳಿತು ಎಂದು ವ್ಯಂಗವಾಡಿದರು.
ವಿಫಲ ಗೃಹ ಸಚಿವರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದಿನಬೆಳಗಾದರೆ ಅತ್ಯಾಚಾರ, ಕೊಲೆ, ದರೋಡೆಗಳದ್ದೇ ಕಾರುಬಾರು ನಡೆದಿದ್ದು ಸರ್ಕಾರಕ್ಕೆ ನಾಚಿಕೆ ಬರಬೇಕು. ರಾಜ್ಯದ ಗೃಹ ಸಚಿವರು ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ. ಗೃಹ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದರು.
ಬರಗಾಲ ಘೋಷಣೆಗೆ ಮೀನಮೇಷ: ಕೃಷಿಕರು ಸಾವಿರಾರು ರುಪಾಯಿ ವ್ಯಯಿಸಿ ಬಿತ್ತನೆ ಮಾಡಿದ್ದಾರೆ. ಆದರೆ ಮಳೆಯಾಗದ ಕಾರಣ ಬಿತ್ತಿದ ಬೀಜಗಳು ನಾಶವಾಗಿದ್ದು ಸರ್ಕಾರ ಈ ಭಾಗಕ್ಕೆ ಬರಗಾಲ ಘೋಷಣೆ ಮಾಡುವಲ್ಲಿ ಮೀನಮೇಷ ಎಣಿಸುತ್ತಿದೆ. ಜಿಲ್ಲೆಯಲ್ಲಿ ಆಲಿಕಲ್ಲು ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು ಜಿಲ್ಲಾಡಳಿತ ವರದಿ ತಯಾರಿಸುವಲ್ಲಿ ವಿಫಲವಾಗಿದೆ. ಬೇರೆ ಇಲಾಖೆ ಮೇಲೆ ಗೂಬೆಕೂರಿಸುವ ಕೆಲಸ ಮಾಡುತ್ತಿದೆ ಎಂದರು.
ಸಂಸದ ಭಗವಂತ ಖೂಬಾ, ಶಾಸಕ ಪ್ರಭು ಚವ್ಹಾಣ, ಜಿಪಂ ಅಧ್ಯಕ್ಷೆ ನೀಲಮ್ಮಾ ವಡ್ಡೆ ಮಾತನಾಡಿದರು. ಜಿಪಂ ಉಪಾಧ್ಯಕ್ಷೆ ದೀಪಿಕಾ ರಾಠೋಡ, ಪ್ರಮುಖರಾದ ವಿದ್ಯಾಸಾಗರ ಕುಲಕರ್ಣಿ, ದತ್ತು, ಉಪೇಂದ್ರ ದೇಶಪಾಂಡೆ, ಶಿವಾನಂದ ಮಂಠಾಳಕರ್, ಸುಚಿತ್ರಾ ಹಂಗರಗೆ, ಬಾಬುರಾವ ಮದಕಟ್ಟಿ ಇತರರು ಪಾಲ್ಗೊಂಡಿದ್ದರು.
ಉಸ್ತುವಾರಿ ಸಚಿವರ ಬದಲಾಯಿಸಿ
ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಬಗ್ಗೆ ಮಾಹಿತಿಯಿಲ್ಲದವರಿಗೆ ಉಸ್ತುವಾರಿ ಹೊಣೆ ನೀಡುವ ಮೂಲಕ ಸರ್ಕಾರ ಕಡೆಗಣಿಸಿದೆ ಎಂದ ಅವರು, ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಮೇಲೆ ಎರಡೂ ಬಾರಿ ಕೂಡ ಪ್ರಗತಿ ಪರಿಶಿಲನಾ ಸಭೆ ನಡೆಸದ ಸಚಿವರು ಜಿಲ್ಲೆಗೆ ಬೇಕಿಲ್ಲ. ಉಸ್ತುವಾರಿ ಸಚಿವರನ್ನು ಬದಲಾಯಿಸಿ ನಮ್ಮ ಜಿಲ್ಲೆಯಲ್ಲಿನ ಶಾಸಕರಿಗೆ ಉಸ್ತುವಾರಿ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಿಗೆ ತಮ್ಮ ಮಾತೃ ಇಲಾಖೆ ಬಗ್ಗೆ ಗೊತ್ತಿಲ್ಲ. ಇನ್ನು ಜಿಲ್ಲೆಯ ಉಸ್ತುವಾರಿ ಹೇಗೆ ನಿಭಾಯಿಸುತ್ತಾರೆ ಎಂದ ಮಲ್ಕಾಪುರೆ, ರಾಜ್ಯದಲ್ಲಿನ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರದ ರೂಪದಲ್ಲಿ ಮೊಟ್ಟೆ ನೀಡುತ್ತಿಲ್ಲ ಎನ್ನವುದನ್ನು ನಾವೇ ತಿಳಿಸಬೇಕೆಂದು ಲೇವಡಿ ಮಾಡಿದರು.
ಬರಪೀಡಿತ ಜಿಲ್ಲೆ ಘೋಷಿಸಿ
ಬಿಜೆಪಿ ಅಧಿಕಾರದಲ್ಲಿದ್ದಾಗ 43 ತಾಲೂಕುಗಳ ಘೋಷಣೆ ಮಾಡಿತ್ತು. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಘೋಷಣೆಯಾದ ತಾಲೂಕುಗಳತ್ತ ಗಮನ ಹರಿಸುತ್ತಿಲ್ಲ ಎಂದ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಗಂದಗೆ, ಬೀದರ್ ಜಿಲ್ಲೆಯನ್ನು ಬರಗಾಲ ಪೀಡಿತ ಘೋಷಣೆಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು. ಜಿಲ್ಲಾ ಕಾರ್ಯಕಾರಿಣಿಯಲ್ಲಿ ಒಟ್ಟು 3 ನಿರ್ಣಯಗಳನ್ನು ಕೈಗೊಳ್ಳಲಾಯಿತು ಕಾಂಗ್ರೆಸ್ನ ವೈಫಲ್ಯಗಳು ಹಾಗೂ ಹೋರಾಟಗಳು. ಬೀದರ್ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಾಗೂ ಪರಿಹಾರ. ನೂತನ ತಾಲೂಕಗಳ ರಚನೆ ಬಗ್ಗೆ ಹಾಗೂ ಹೋರಾಟಗಳು ಈ ಮೂರು ನಿರ್ಣಯಗಳ ಕುರಿತು ಸಭೆಯಲ್ಲಿ ಚರ್ಚೆಯಾಯಿತು.
ಜನರಿಗೆ ಪರಿಹಾರ ಕಲ್ಪಿಸಿ
ನಾವು ರಾಷ್ಟ್ರ ಮಟ್ಟದಲ್ಲಿ ಅಧಿಕಾರದಲ್ಲಿದ್ದು ರಾಜ್ಯದಲ್ಲಿ ಪ್ರತಿ ಪಕ್ಷದ ಸ್ಥಾನದಲ್ಲಿ ಕುಳಿತಿದ್ದೇವೆ. ಆದರೂ ನಮ್ಮ ಉದ್ದೇಶ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದಾಗಿದೆ ಎಂದು ಪ್ರಕಾಶ ಖಂಡ್ರೆ ಹೇಳಿದರು. ಪಕ್ಷವನ್ನು ಬೂತ್ ಮಟ್ಟದಿಂದ ಬೆಳೆಸುವಂತೆ ಸಭೆಯಲ್ಲಿ ಸಲಹೆ ನೀಡಿದ ಅವರು, ಕಾರ್ಯಕಾರಿಣಿ ಉದ್ದೇಶ ಹೋರಾಟದ ರೂಪುರೇಷೆ ಸಿದ್ಧಪಡಿಸುವುದಾಗಿದೆ. ಜನರಿಗೆ ವಿಶ್ವಾಸ ನೀಡುವ ಮೂಲಕ ಪಕ್ಷದ ಉದ್ದೇಶ ತಿಳಿಸುವಂತೆ ಸಲಹೆ ನೀಡಿದರು. ಜಿಲ್ಲೆಗೆ ಮುಂಬರುವ ದಿನಗಳಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ಷಾ ಆಗಮಿಸುತ್ತಿದ್ದು ಅವರ ಪಾದಸ್ಪರ್ಶದಿಂದ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕೇಸರಿ ಧ್ವಜ ಹಾರಾಡುವುದರಲ್ಲಿ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.