ಬೀದರ್: ಮಕ್ಕಳಲ್ಲಿ ಕಂಡುಬರುವ ಅತಿಸಾರ ಭೇದಿ ನಿಯಂತ್ರಿಸುವ ಕುರಿತಾಗಿನ ಕಾರ್ಯಾಗಾರ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಯಿತು.
ಜಿಪಂ ಅಧ್ಯಕ್ಷೆ ನೀಲಮ್ಮ ಶಿವಾನಂದ ವಡ್ಡೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮಕ್ಕೆ ಜೋಡಿ ನಂಬರ್ 1 ಎಂದು ನಾಮಕರಣ ಮಾಡಿದ್ದು, ಇದು ಯಶಸ್ವಿಯಾಗಬೇಕಾದರೆ ಗ್ರಾಮೀಣ ಪ್ರದೇಶದಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ ವಾಂತಿ-ಭೇದಿ ಕಂಡು ಬಂದ ತಕ್ಷಣ ಆರೋಗ್ಯ ಕಾರ್ಯಕರ್ತರು ಅಥವಾ ಆಶಾ ಕಾರ್ಯಕರ್ತೆಯರು ತಕ್ಷಣ ಸ್ಪಂದಿಸಿ ಮಕ್ಕಳ ಜೀವ ರಕ್ಷಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿ: ಜಿಪಂ ಆರೋಗ್ಯ ಮತ್ತು ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಸದಸ್ಯ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು, ಪ್ರತಿ ಮನೆಗಳಿಗೆ ಶೌಚಾಲಯ ಕಟ್ಟಿಸಿಕೊಳ್ಳಲು ಸರ್ಕಾರದಿಂದ ಸಹಾಯ ಧನ ದೊರೆಯುತ್ತಿದೆ. ಇದರ ಲಾಭ ಪಡೆದುಕೊಳ್ಳಬೇಕು. ಕುಡಿಯುವ ನೀರನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮದನಾ ವೈಜನಾಥ ಮಾತನಾಡಿ, ಜಿಲ್ಲೆಯ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಆರ್‌ಎಸ್ ಕೇಂದ್ರ ಸ್ಥಾಪಿಸಿ ಚಿಕಿತ್ಸೆ ನೀಡಲು ಒಬ್ಬ ಸಿಬ್ಬಂದಿಗೆ ಜವಾಬ್ದಾರಿ ವಹಿಸಲು ತಿಳಿಸಿದರು. ಡಾ. ಶಿವಶಂಕರ ಬಿ., ಡಾ. ಮಾರ್ಥಾಂಡರಾವ್ ಖಾಸೆಂಪುರ, ಡಾ. ಅನೀಲ ಚಿಂತಾಮಣಿ ಇದ್ದರು.
Advertisement