ಬೀದರ್: ಸರ್ಕಾರದ ಆದೇಶ ಗಾಳಿಗೆ ತೂರಿ ದಲಿತ ವಿರೋಧಿ ನೀತಿ ಅನುಸರಿಸಿ ಅನುಸೂಚಿತ ಜಾತಿ, ಪಂಗಡಗಳ ದೌರ್ಜನ್ಯ ತಡೆಗೆ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ರಚಿಸುವಲ್ಲಿ ಜಿಲ್ಲಾಧಿಕಾರಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತಿದ್ದಾರೆ ಎಂದು ಆರೋಪಿಸಿ ದಸಂಸ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಇತ್ತೀಚೆಗೆ ಜಿಪಂನಲ್ಲಿ ಹಮ್ಮಿಕೊಳ್ಳಲಾದ ಕೆಡಿಪಿ ಸಭೆಗೆ ಆಗಮಿಸಿದ ಸಚಿವೆ ಉಮಾಶ್ರೀ ಅವರನ್ನು ತಡೆದು ಮನವಿ ಸಲ್ಲಿಸಿದ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ರಾಜಕುಮಾರ ಮೂಲಭಾರತಿ, ಜಿಲ್ಲಾ ಸಂಚಾಲಕ ಶಿವಕುಮಾರ ನೀಲಿಕಟ್ಟಿ, ಓಂಪ್ರಕಾಶ ಭಾವಿಕಟ್ಟಿ, ದಯಾನಂದ ನೌಲೆ, ಮಡಿವಾಳೇಶ್ವರ ಸಿಂಧೆ, ಜಗನ್ನಾಥ ಹೊನ್ನಾ ಮತ್ತಿತರರು, ದೌರ್ಜನ್ಯ ತಡೆ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ರಚಿಸುವಲ್ಲಿ ವಿಫಲರಾದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಿಗುವ ವಿವಿಧ ಯೋಜನೆಗಳು ಕಡು ಬಡವರ ಬದಲು ಸಿರಿವಂತರ ಪಾಲಾಗುತ್ತಿರುವುದನ್ನು ತಡೆಯಬೇಕು, ಎಸ್‌ಸಿ, ಎಸ್‌ಟಿ ಜನಾಂಗದ ಬಿಪಿಎಲ್ ಪಡಿತರ ಚೀಟಿಗಳನ್ನು ಹೆಚ್ಚಾಗಿ ರದ್ದಾಗಿದ್ದು, ಅದನ್ನು ಪರಿಶೀಲನೆ ಮಾಡಿ ಪಡಿತರ ಚೀಟಿ ವಿತರಣೆ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಆ.15ರಂದು ತಮ್ಮ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
Advertisement