ಕ.ಪ್ರ. ವಾರ್ತೆ ್ಣ ಬೀದರ್ ್ಣ ಆ.5
ಸ್ವಾತಂತ್ರ್ಯ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ, ಆ.15ರಂದು ಬೆಳಗ್ಗೆ 9 ಗಂಟೆಗೆ ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ, ಧ್ವಜವಂದನೆ ನಂತರ ಶಾಲಾ-ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸರ್ಕಾರಿ ಇಲಾಖೆ, ಶಾಲಾ-ಕಾಲೇಜುಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುವುದು ಕಡ್ಡಾಯ ಎಂದು ತಿಳಿಸಿದರು.
ಸ್ವಾತಂತ್ರ್ಯ ದಿನಾಚರಣೆಯ ಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲು ಅಧಿಕಾರಿಗಳನ್ನೊಳಗೊಂಡ ವಿವಿಧ ಉಪ ಸಮಿತಿಗಳನ್ನು ರಚಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ಶಿವಯ್ಯ ಜವಾಬ್ದಾರಿ ವಹಿಸಿದರು.
ನೌಕರರ ಹಾಜರಾತಿ ಕಡ್ಡಾಯ: ಆ.15ರಂದು ಬೆಳಗ್ಗೆ ಎಲ್ಲ ಸರ್ಕಾರಿ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಬೆಳಗ್ಗೆ 8.30ರವರೆಗೆ ಧ್ವಜಾರೋಹಣ ಕಡ್ಡಾಯವಾಗಿ ಮಾಡಬೇಕು. ನಂತರ ಬೆಳಗ್ಗೆ 9 ಗಂಟೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದ ಮುಖ್ಯ ಸಮಾರಂಭಕ್ಕೆ ಎಲ್ಲ ಸಿಬ್ಬಂದಿಯೊಂದಿಗೆ ಹಾಜರಾಗಬೇಕು. ಈ ಕಾರ್ಯಕ್ರಮಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.
ಅಂದು ಸಂಜೆ ನಗರದ ರಂಗಮಂದಿರಲ್ಲಿ ಶಾಲಾ-ಕಾಲೇಜು ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ಇದರಲ್ಲಿ ದೇಶಭಕ್ತಿಗೆ ಸಂಬಂಧಿಸಿದ ಪ್ರದರ್ಶನಗಳ ಆಯ್ಕೆ ಮಾಡುವಂತೆ ತಿಳಿಸಿದರು. ಸ್ವಾತಂತ್ರ್ಯ ದಿನಾಚರಣೆಯ ಎರಡು ಕಾರ್ಯಕ್ರಮಗಳಿಗೆ ಶಾಲಾ- ಕಾಲೇಜು ಮಕ್ಕಳು, ಸಾರ್ವಜನಿಕರು, ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಪ್ಲಾಸ್ಟಿಕ್ ಧ್ವಜ ಬಳಕೆ ನಿಷೇಧ: ಜಿಲ್ಲೆಯಲ್ಲಿ ರಾಷ್ಟ್ರ ಧ್ವಜವನ್ನು ಪ್ಲಾಸ್ಟಿಕ್‌ನಲ್ಲಿ ತಯಾರಿಸುವುದು ಹಾಗೂ ಅವುಗಳನ್ನು ಮಾರಾಟ ಮಾಡುವುದನ್ನು ಜಿಲ್ಲಾಡಳಿತ ಕಡ್ಡಾಯವಾಗಿ ನಿಷೇಧಿಸಿದೆ. ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಧ್ವಜದ ತಯಾರಿಕೆ ಹಾಗೂ ಮಾರಾಟ ಕಂಡು ಬಂದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಸುತ್ತೋಲೆ ಹೊರಡಿಸಲಾಗುವುದು ಎಂದರು.
ಬಸವಕಲ್ಯಾಣ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಪ್ಲಾಸ್ಟಿಕ್ ಧ್ವಜವನ್ನು ನಿಷೇಧಿಸುವಂತೆ ಸಲಹೆ ನೀಡಿದರು. ಬೀದರ್ ಉಪ ವಿಭಾಗಾಧಿಕಾರಿ ಆರತಿ ಆನಂದ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ನಗರದ ವಿವಿಧ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಸಲಹೆ ನೀಡಿದರು.
Advertisement