ಕ.ಪ್ರ. ವಾರ್ತೆ ್ಣ ಔರಾದ್ ್ಣ ಆ.5
ಔರಾದ್ ತಾಲೂಕು ಬರಗಾಲ ಘೋಷಣೆಗೆ ವರದಿ ಸಲ್ಲಿಸಿ, ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ, ಶಿಕ್ಷಕರನ್ನು ಬಿಎಲ್‌ಒ(ಬೂತ್ ಮಟ್ಟದ ಅಧಿಕಾರಿ) ಹುದ್ದೆಯಿಂದ ತೆಗೆದು ಹಾಕಿ, ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಕರು ಶಾಲೆಗೆ ಚಕ್ಕರ್ ಹೊಡೆಯುತ್ತಿದ್ದಾರೆ, ವಿವಿಧ ಇಲಾಖೆಗಳಲ್ಲಿ ಲಂಚ ತಾಂಡವವಾಡುತ್ತಿದೆ, ಜೆಸ್ಕಾಂ ಲೈನ್‌ಮನ್ ಲಂಚ ಪಡೆಯುತ್ತಿದ್ದಾರೆ, ಎಂಬಿತ್ಯಾದಿ ವಿಷಯಗಳು ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸ ಮಾಡಿಕೊಟ್ಟವು.
ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಸ್ತಕ ಸಾಲಿನ ತ್ರೈಮಾಸಿಕ ಪ್ರಗತಿ ಪರಿಶಿಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಮಯದಲ್ಲಿ ಶಾಸಕ ಪ್ರಭು ಚವ್ಹಾಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಆಡಳಿತಕ್ಕೆ ಬಿಸಿ ಮುಟ್ಟಿಸಿದರು.
ಸ್ಥಿತಿಗತಿಗಳ ಬಗ್ಗೆ ವರದಿ: ಕೃಷಿ ಇಲಾಖೆ ಪ್ರಗತಿ ಪರಿಶೀಲನಾ ಸಮಯದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ತಾಲೂಕಿನ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಅಧಿಕಾರಿಗಳು ಇಲ್ಲಿನ ಸ್ಥಿತಿಗತಿಗಳ ಬಗ್ಗೆ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸಭೆಯಲ್ಲಿ ಸೂಚಿಸಿದರು.
ತಾಲೂಕಿನಲ್ಲಿ ಜೂನ್ ತಿಂಗಳಲ್ಲಿ 142 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 36 ಮಿ.ಮೀ. ಮಳೆಯಾಗಿದೆ. ಜುಲೈ ತಿಂಗಳಲ್ಲಿ 218 ಮಿ.ಮೀ. ಮಳೆಯಾಗಬೇಕಿತ್ತು. ಆದದ್ದು ಕೇವಲ 75 ಮಿ.ಮೀ. ಮಾತ್ರ ಮಳೆಯಾಗಿದ್ದು, 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಅಧಿಕಾರಿ ಸೋಮಶೇಖರ ಸಭೆಗೆ ಮಾಹಿತಿ ನೀಡಿದರು.
ಶಿಕ್ಷಕರು ಶಾಲೆಗೆ ಚಕ್ಕರ್: ಜೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿ ಲಂಚ ಪಡೆಯುತ್ತಿದ್ದಾರೆ, ಹಣ ನೀಡದಿದ್ದರೆ ಪರಿವರ್ತಕಗಳನ್ನು ದುರಸ್ತಿ ಮಾಡುತ್ತಿಲ್ಲ. ಇನ್ನು ಒಂದೆ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಯಾಕೆ ಬದಲಾಯಿಸಿಲ್ಲ ಎಂದು ಶಾಸಕರು ಸಭೆಯಲ್ಲಿ ಎಇಇಗೆ ಪ್ರಶ್ನೆಗಳ ಸುರಿಮಳೆಗೈದರು. ಇದಕ್ಕೆ ಉತ್ತರಿಸಿದ ಜೆಸ್ಕಾಂ ಎಇಇ ವಿವೇಕಾನಂದ, ಅಂತಹ ಯಾವುದೇ ಪ್ರಕರಣ ಕಂಡು ಬಂದಿಲ್ಲ, ಒಂದು ವೇಳೆ ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳುವೆ. ಇನ್ನು ಒಂದೆ ಕಡೆ ಕರ್ತವ್ಯ ನಿರ್ವಹಿಸುವವರನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂಬ ಸಭೆಗೆ ಭರವಸೆ ನೀಡಿದರು.
ಶಿಕ್ಷಕರನ್ನು ಬಿಎಲ್‌ಒ(ಬೂತ್ ಮಟ್ಟದ ಅಧಿಕಾರಿ) ಎಂದು ನೇಮಿಸಿದ್ದೆ ನೆಪ ಮಾಡಿಕೊಂಡ ಶಿಕ್ಷಕರು ಶಾಲೆಗೆ ಚಕ್ಕರ್ ಹೊಡೆದು ತಮ್ಮ ಮನೆಗೆಲಸ ಹಾಗೂ ರಾಜಕೀಯ ಮಾಡುತ್ತಾ ತಿರುಗಾಡುತ್ತಿದ್ದಾರೆ. ಅಂತಹವರ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಅಂತಹ ಶಿಕ್ಷಕರನ್ನು ಬಿಎಲ್‌ಒ ಕೆಲಸದಿಂದ ತೆಗೆದು ಹಾಕಿ ಎಂದು ಫರ್ಮಾನು ಹೊರಡಿಸಿದರು.
ತಾಲೂಕಿನಲ್ಲಿ ಒಟ್ಟು 221 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಶಿಕ್ಷಣಾಧಿಕಾರಿ ಸಭೆಗೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಶಿಕ್ಷಕರ ಹುದ್ದೆ ತುಂಬಿಕೊಳ್ಳಲು ನನ್ನ ಅನುದಾನ ನೀಡುತ್ತೇನೆ. ಕೂಡಲೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಸೂಚಿಸಿದರು.
ತಾಪಂ ಉಪಾಧ್ಯಕ್ಷೆ ಶೀಲಾಬಾಯಿ ರಾಠೋಡ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಅನೀತಾ ಸಜ್ಜನಶೆಟ್ಟಿ, ಇಒ ಜಗನ್ನಾಥ ರೆಡ್ಡಿ, ತಹಸೀಲ್ದಾರ್ ಎಚ್. ವೆಂಕಣ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು.
Advertisement