ಬೀದರ್: ಜಿಲ್ಲೆಯ ಕನ್ನಡ ಲೇಖಕರು, ಕಥೆಗಾರ ಹಾಗೂ ಸಾಹಿತಿಗಳನ್ನು ಪರಿಚಯಿಸುವುದಕ್ಕಾಗಿ ಆ.8 ಹಾಗೂ 9ರಂದು ಕನ್ನಡ ಭಾಷಾ ಬೋಧಕರ ವಿಷಯ ಸಂಪದೀಕರಣ ಸಮ್ಮೇಳನ ನಡೆಯಲಿದೆ ಎಂದು ಕನ್ನಡ ಭಾಷಾ ಬೋಧಕರ ಸಂಘದ ಅಧ್ಯಕ್ಷ ಡಾ. ಟಿ.ಆರ್. ದೊಡ್ಡೆ ತಿಳಿಸಿದರು.
ನಗರದ ಸರ್ವ ಶಿಕ್ಷಣ ಅಭಿಯಾನದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಜಿಲ್ಲಾ ರಂಗಮಂದಿರದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಸಾಹಿತ್ಯ ಮತ್ತು ಕನ್ನಡ ಭಾಷೆಯ ಬಳಕೆ, ಕೃತಿ ರಚನೆಗೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ. ಆ.8ರಂದು ಬೆಳಗ್ಗೆ 10ಕ್ಕೆ ನಡೆಯಲಿರುವ ಸಮ್ಮೇಳನವನ್ನು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ. ಅರವಿಂದ ಮಾಲಗತ್ತಿ ಉದ್ಘಾಟಿಸುವರು ಎಂದರು.
ವಿಶೇಷ ಉಪನ್ಯಾಸ: ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಡಿ. ಸರಸ್ವತಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶಿಕ್ಷಣ ಇಲಾಖೆಯ ನಿರ್ದೇಶಕ ಎಸ್.ಆರ್. ಮನವಳ್ಳಿ, ಸಿ.ವಿ. ಹಿರೇಮಠ, ಪ್ರೊ. ಜಿ.ಎಸ್. ಮುಡಂಬಡಿತ್ತಾಯ ಮುಖ್ಯ ಅತಿಥಿಯಾಗಿ ಆಗಮಿಸುವರು.
ಡಾ. ವಜ್ರಾ ಪಾಟೀಲ ಅವರು ಆಧುನಿಕ ಕಾವ್ಯ, ಡಾ. ಎಸ್. ವಿದ್ಯಾಶಂಕರ ಅವರು ನಡುಗನ್ನಡ ಕಾವ್ಯ, ಸುರೇಶ ಕುಲಕರ್ಣಿ ಅವರು ಬೇಂದ್ರೆ ಕಾವ್ಯ, ಪ್ರೊ. ವೀರೇಂದ್ರ ಸಿಂಪಿ ಲಲಿತ ಪ್ರಬಂಧ ಕುರಿತು ಮಾತನಾಡುವರು.
ಆ.9ರಂದು ಡಾ. ಜಯಶ್ರೀ ದಂಡೆ ಅವರು ವಚನ ಸಾಹಿತ್ಯ, ಡಾ. ಸ್ವಾಮಿರಾವ ಕುಲಕರ್ಣಿ ಅವರು ದಾಸ ಸಾಹಿತ್ಯ, ಡಾ. ಗುರುಪಾದ ಮರಗುತ್ತಿ ಅವರು ಹಳೆಗನ್ನಡ ಕಾವ್ಯ ಕುರಿತು ಮಾತನಾಡುವರು. ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಶಿಕ್ಷಣ ಇಲಾಖೆಯ ಆಯುಕ್ತ ರಾಧಾಕೃಷ್ಣರಾವ ಮದನಕರ್, ನಿರ್ದೇಶಕ ಸಿ.ವಿ. ಹಿರೇಮಠ, ಸಾಹಿತಿಗಳಾದ ದೇಶಾಂಶ ಹುಡಗಿ, ಎಂ.ಜಿ. ಹವಾಲ್ದಾರ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಒಒಡಿ ಸೌಲಭ್ಯ: ಜಿಲ್ಲೆಯ 156 ಸರ್ಕಾರಿ, 160 ಖಾಸಗಿ ಅನುದಾನಿತ ಮತ್ತು 224 ಅನುದಾನರಹಿತ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 400ಕ್ಕೂ ಹೆಚ್ಚು ಕನ್ನಡ ಭಾಷಾ ಬೋಧಕರು ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಒಒಡಿ ಸೌಲಭ್ಯ ಕಲ್ಪಿಸಲಾಗಿದೆ. ಸಮ್ಮೇಳನದಲ್ಲಿ ಎಸ್‌ಎಸ್‌ಎಲ್‌ಸಿ ಕನ್ನಡ ಭಾಷಾ ಪರೀಕ್ಷೆಯಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ ಜಿಲ್ಲೆಯ 6 ವಿದ್ಯಾರ್ಥಿಗಳು ಮತ್ತು ಶಾಲೆಯ ಕನ್ನಡ ಶಿಕ್ಷಕರಿಗೆ ಹಾಗೂ ಪೋಷಕರಿಗೆ ಸನ್ಮಾನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಡಿಪಿಐ ಬಸವರಾಜ ಗೌನ್ನಳ್ಳಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಾಂಡುರಂಗ ಬೆಲ್ದಾರ, ಸಹ ಶಿಕ್ಷಕ ಸಂಘದ ಅಧ್ಯಕ್ಷ ದೇವೇಂದ್ರ ಭಾಲ್ಕೆ, ಪತ್ರಾಂಕಿತ ಸಹಾಯಕ ಗೊಂಡ ಬಾಬುರಾವ, ದಿಗಂಬರ, ಶಿವಕುಮಾರ ಇದ್ದರು.
Advertisement