ಬೀದರ್: ನಗರದ ದುಲ್ಹನ್ ದರ್ವಾಜಾ ಹತ್ತಿರದ ದಾಲ್ ಮಿಲ್ ಪ್ರದೇಶದಲ್ಲಿ ತೆರೆದ ಕೊಳವೆಬಾವಿಯ ಹೂಳೆತ್ತುವ ಕಾಮಗಾರಿಯನ್ನು ಅರ್ಧದಲ್ಲೇ ಕೈಬಿಟ್ಟಿರುವುದನ್ನು ಪತ್ರಕರ್ತ ಖಾಜಿ ಅಲಿಯೊದ್ದೀನ್(ಅಲಿಬಾಬಾ) ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ ಅವರ ಗಮನಕ್ಕೆ ತಂದರು.
ನಗರದ ಹಾರೂರಗೇರಿ ಪ್ರದೇಶಕ್ಕೆ ತೆರೆದ ಕೊಳವೆಬಾವಿ ಪರಿಶೀಲಿಸಲು ಬುಧವಾರ ಭೇಟಿ ನೀಡಿದ ನ್ಯಾಯಾಧೀಶರಿಗೆ ಅಲಿಬಾಬಾ ಅವರು ಚಿತ್ರಗಳ ಸಹಿತ ಗಮನಸೆಳೆದು ರಸ್ತೆಯ ಮಧ್ಯೆ ಇದ್ದ ಕೊಳವೆಬಾವಿಯನ್ನು ಸಂಪೂರ್ಣವಾಗಿ ತೆರೆದಿಟ್ಟು ಹೂಳೆತ್ತುವ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದರು.
ತಿಂಗಳ ಹಿಂದೆ ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದ ಸಂದರ್ಭದಲ್ಲಿ ಕೊಳವೆಬಾವಿಯನ್ನು ತೆರೆದು ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ವಾರದವರೆಗೆ ಮಾತ್ರ ಕಾಮಗಾರಿ ನಡೆದು ಅರ್ಧದಲ್ಲೇ ನಿಲ್ಲಿಸಲಾಗಿದೆ. ಈ ಸಂಬಂಧ ನಗರಸಭೆಯ ಗಮನ ಸೆಳೆದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ರಸ್ತೆಯಲ್ಲಿ ತೆರೆದ ಕೊಳವೆಬಾವಿ ಇರುವುದರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ ಮಕ್ಕಳು ಬಾವಿಗೆ ಬೀಳುವ ಭೀತಿ ಉಂಟಾಗಿದೆ. ಮಕ್ಕಳಿಗೆ ಆಗುವ ಅಪಾಯವನ್ನು ತಪ್ಪಿಸಲು ಕೆಲ ಪಾಲಕರು ತಮ್ಮ ಮನೆಗಳಿಗೆ ಬೀಗ ಹಾಕಿ ಬೇರೆ ಕಡೆಗೆ ತೆರಳಿದ್ದಾರೆ ಎಂದು ತಿಳಿಸಿದರು.
Advertisement