ಬೀದರ್: ಜಿಲ್ಲೆಯಲ್ಲಿ ಬಾಯ್ದೆರೆದು ಬಲಿಗಾಗಿ ಕಾಯುತ್ತಿರುವ ಕೊಳವೆ ಬಾವಿಗಳಿಂದ ಅವಘಡ ತಪ್ಪಿಸಲು ಜಿಲ್ಲಾ ನ್ಯಾಯಾಧೀಶರೇ ಮುಂದಾಗಿ ಜಿಲ್ಲಾಡಳಿತದ ಕಣ್ಣು ತೆರೆಸಿದ್ದಾರೆ.
ಬುಧವಾರ ಮಧ್ಯಾಹ್ನ ನಗರದ ಹಾರೂರಗೇರಿ ಬಡಾವಣೆಯಲ್ಲಿ ಬಾಯಿ ತೆರೆದಿದ್ದ ಕೊಳವೆ ಬಾವಿಯ ಕುರಿತು ಮಾಹಿತಿ ಪಡೆಯಲು ಖುದ್ದು ನ್ಯಾಯಾಧೀಶರೇ ವೀಕ್ಷಿಸುವ ಮೂಲಕ ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೇ ವಿಫಲ ಕೊಳವೆ ಬಾವಿಗಳ ಕುರಿತು ದೂರು ನೀಡಿರಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಜಿಲ್ಲಾಡಳಿತ ಗಮನ ಸೆಳೆದರು: ಬಾಗಲಕೋಟೆ ಸೂಳೀಕೇರಿಯ ದುರಂತದಿಂದ ಎಚ್ಚೆತ್ತಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ ಅವರು, ನ್ಯಾಯಾಧೀಶರು ಮತ್ತು ವಕೀಲರೊಂದಿಗೆ ತುರ್ತು ಸಭೆ ನಡೆಸಿದ್ದರು. ಸ್ವಯಂಪ್ರೇರಣೆಯಿಂದ ಜಿಲ್ಲೆಯಾದ್ಯಂತ ವಿಫಲಗೊಂಡಿರುವ ಕೊಳವೆ ಬಾವಿಗಳನ್ನು ಮುಚ್ಚಿಸುವ ದಿಸೆಯಲ್ಲಿ ಜಿಲ್ಲಾಡಳಿತ ಗಮನ ಸೆಳೆಯುವುದು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ನಗರದಲ್ಲಿಯೇ ಎರಡು ಕಡೆ ಬಾಯ್ದೆರೆದಿದ್ದ ಕೊಳವೆ ಬಾವಿಗಳನ್ನು ವೀಕ್ಷಿಸಿದ ನ್ಯಾಯಾಧೀಶರು, ಸ್ಥಳದಲ್ಲಿಯೇ ಇದ್ದ ನಗರಸಭೆ ಆಯುಕ್ತ ಕೆ. ಜಗದೀಶ ನಾಯಕ ಅವರನ್ನು ತರಾಟೆಗೆ ತೆಗೆದುಕೊಂಡರು.
ಆಯುಕ್ತರ ವಿರುದ್ಧ ಆಕ್ರೋಶ: ಎಲ್ಲ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಅನುಪಯುಕ್ತ ಕೊಳವೆ ಬಾವಿಗಳನ್ನು ಪತ್ತೆ ಹಚ್ಚಿ ಅವುಗಳನ್ನು ಮುಚ್ಚಿಸಲು ಕ್ರಮ ಜರುಗಿಸಬೇಕು. ಇಂಥ ಕೊಳವೆಬಾವಿಗಳು ಕಂಡು ಬಂದರೆ ಸಾರ್ವಜನಿಕರು ಕಾನೂನು ಪ್ರಾಧಿಕಾರಕ್ಕೆ ದೂರವಾಣಿ ಅಥವಾ ಪತ್ರದ ಮೂಲಕ ದೂರು ನೀಡಿದಲ್ಲಿ ಅವುಗಳನ್ನು ಮುಚ್ಚಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಎರಡು ಕೊಳವೆ ಬಾವಿಗಳಲ್ಲಿ ನೀರು ಇದೆ, ಆದ್ದರಿಂದ ಪೈಪ್‌ಲೈನ್ ಅಳವಡಿಸಿ ಎಂದು ನಗರಸಭೆಗೆ ಮನವಿ ಮಾಡಿದ್ದರೂ ನಗರಸಭೆ ಯಾವುದೇ ವ್ಯವಸ್ಥೆ ಕೈಗೊಂಡಿಲ್ಲ ಎಂದು ನ್ಯಾಯಾಧೀಶರ ಎದುರೇ ಬಡಾವಣೆಯ ಜನರು ಆಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ರಾಜಾ ಸೋಮಶೇಖರ, ವಕೀಲ ಸಂಘದ ಅಧ್ಯಕ್ಷ ಕೆ. ಕಾಶಿನಾಥ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಡಿವೈಎಸ್ಪಿ ಬಸವಣಪ್ಪ ಮತ್ತು ನಗರಸಭೆ ಎಇಇ ಮೋಯಿಜ್ ಹುಸೇನ್ ಸೇರಿದಂತೆ ಬಡಾವಣೆಯ ಪ್ರಮುಖರು, ಸಾರ್ವಜನಿಕರು ಇದ್ದರು.
Advertisement